Sidlaghatta : ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ 91 ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ತಾಲ್ಲೂಕು ಜೆಡಿಎಸ್ ಮುಖಂಡರು ಗುರುವಾರ ಸಾರ್ವಜನಿಕ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು, ಹಾಲು, ಬ್ರೆಡ್ ವಿತರಣೆ ಮಾಡಿ, ಕೇಕ್ ಕತ್ತರಿಸುವ ಮೂಲಕ ಆಚರಣೆ ಮಾಡಿದರು.
ಜೆಡಿಎಸ್ ಮುಖಂಡ ಮುಗಿಲಡಿಪಿ ನಂಜಪ್ಪ ಮಾತನಾಡಿ, ರಾಷ್ಟ್ರಮಟ್ಟದ ನಾಯಕರಾಗಿರುವ ದೇವೇಗೌಡರು, ದೇಶದ ರೈತರು, ಕಾರ್ಮಿಕರು, ಸೇರಿದಂತೆ ದುಡಿಯುವ ಶ್ರಮಿಕ ವರ್ಗದ ಪರವಾಗಿ ಚಿಂತನೆಗಳನ್ನು ಮಾಡುವ ಮೂಲಕ ಎಲ್ಲಾ ವರ್ಗದ ಜನತೆ ಸಾಮಾಜಿಕ ನ್ಯಾಯ ಕಲ್ಪಿಸುವಂತಹ ಪರಿಕಲ್ಪನೆ ಹೊಂದಿಕೊಂಡಿದ್ದಾರೆ. ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಮತ್ತು ಮಹಿಳೆಯರು ಹೀಗೆ ಎಲ್ಲರಿಗೂ ಲಾಭ ಸಿಗುವಂತೆ ಮೀಸಲಾತಿ ಯೋಜನೆಯನ್ನು ಜಾರಿಗೆ ತಂದವರು ದೇವೇಗೌಡರು ಎಂದು ಹೇಳಿದರು.
ನಗರಸಭೆ ಸದಸ್ಯ ರಾಘವೇಂದ್ರ ಮಾತನಾಡಿ, ಸಮಾಜದ ಎಲ್ಲ ವರ್ಗಗಳ ಜನರ ಅಹವಾಲುಗಳನ್ನು ಸಮಾಧಾನ ಚಿತ್ತದಿಂದ ಆಲಿಸಿ ಪರಿಹಾರ ನೀಡಲು ಯತ್ನಿಸುವ ತಮ್ಮ ಗುಣದಿಂದ ದೇವೇಗೌಡರು ’ಮಣ್ಣಿನ ಮಗ’ ಎಂದು ಹೆಸರುವಾಸಿಯಾಗಿದ್ದಾರೆ. ಅವರ ತತ್ವಸಿದ್ಧಾಂತಗಳನ್ನು ಅಳವಡಿಸಿಕೊಂಡಂತಹ ಮೇಲೂರು ಬಿ.ಎನ್.ರವಿಕುಮಾರ್ ಅವರನ್ನು ಈ ಬಾರಿ ಶಿಡ್ಲಘಟ್ಟದ ಜನತೆ ಶಾಸಕರನ್ನಾಗಿ ಚುನಾಯಿಸಿದ್ದಾರೆ. ಶಿಡ್ಲಘಟ್ಟದ ಅಭಿವೃದ್ಧಿಯನ್ನು ಮಾಡುವ ಪಣವನ್ನು ಅವರು ತೊಟ್ಟಿದ್ದಾರೆ ಎಂದು ಹೇಳಿದರು
ಮುಖಂಡರಾದ ಎಸ್.ಎಂ.ರಮೇಶ್, ಲಕ್ಷ್ಮೀನಾರಾಯಣ, ಶ್ರೀನಿವಾಸ್ ಚಿನ್ನಿ, ಹೈದರ್ ಅಲಿ, ಮುರಳಿ, ಸಿ.ಎಂ.ಬಾಬು, ಎಂ.ಪಿ.ಮುಷ್ಟಾಕ್ ಹಾಜರಿದ್ದರು.