Sidlaghatta : ಶಿಡ್ಲಘಟ್ಟ ತಾಲ್ಲೂಕಿನ H Cross ಗ್ರಾಮ ಪಂಚಾಯಿತಿಯ ಹಾರಡಿ ಗ್ರಾಮದಲ್ಲಿ “ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ” ಕಾರ್ಯಕ್ರಮದಲ್ಲಿ ಭಾಗವಹಿಸಿ ಶಾಸಕ ವಿ.ಮುನಿಯಪ್ಪ(V Muniyappa) ಅವರು ಮಾತನಾಡಿದರು.
ಸ್ತ್ರೀ ಶಕ್ತಿ ಯೋಜನೆಯಿಂದ ಅನೇಕ ಮಹಿಳೆಯರು ಸಂಘಟಿತರಾಗಿ ತಮ್ಮ ಬದುಕನ್ನು ತಾವು ಕಟ್ಟಿಕೊಂಡು ಸ್ವಾಭಿಮಾನದ ಬದುಕನ್ನು ನಡೆಸುವಂತಾಗಿದೆ, ಇದು ಮಹಿಳೆಯರಲ್ಲಿ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ತಿಳಿಸಿದರು.
ನರೇಗಾದಂತ ಯೋಜನೆಗಳು ಗ್ರಾಮಗಳ ಅಭಿವೃದ್ದಿಗೆ ಪೂರಕವಾಗಿದೆ. ಜಾತಿ ಧರ್ಮ ಪಕ್ಷದ ತಾರತಮ್ಯ ಬಿಟ್ಟು ಯೋಜನೆಯನ್ನು ಸದುಪಯೋಗಪಡಿಸಿಕೊಂಡು ಗ್ರಾಮಗಳ ಅಭಿವೃದ್ದಿಗೆ ಒಂದಾಗಬೇಕೆಂದರು.
ಡಿಸಿ ನಡೆ ಹಳ್ಳಿ ಕಡೆ ಕಾರ್ಯಕ್ರಮವು ಹಳ್ಳಿಯ ಜನರ ಸಮಸ್ಯೆ ಹಾಗೂ ಗ್ರಾಮದ ಸಮಸ್ಯೆ ನಿವಾರಣೆಗೆ ಪೂರಕವಾಗಿರಲಿ ಅದಕ್ಕಾಗಿ ನಾವು ನೀವೆಲ್ಲರೂ ಶ್ರಮಿಸಬೇಕೆಂದು ಮನವಿ ಮಾಡಿದರು.
ವಿವಿಧ ಇಲಾಖೆಗಳ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ವಸ್ತು ಪ್ರದರ್ಶನ, ಮಳಿಗೆಗಳನ್ನು ನಿರ್ಮಿಸಲಾಗಿತ್ತು. ಆರೋಗ್ಯ ತಪಾಸಣೆ ಶಿಬಿರ, ಪೌಷ್ಠಿಕ ಆಹಾರ ಪ್ರದರ್ಶನ ಹಾಗೂ ಜಾಗೃತಿ ಕಾರ್ಯಕ್ರಮ ನಡೆಯಿತು. ನಾನಾ ಯೋಜನೆಗಳ ಮಂಜೂರಾತಿ ಆದೇಶ ಪತ್ರಗಳನ್ನು ವಿತರಿಸಲಾಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕೋಚಿಮುಲ್ ನಿರ್ದೇಶಕ ಆರ್.ಶ್ರೀನಿವಾಸ್, ಎಚ್.ಕ್ರಾಸ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ, ಪಿಡಿಒ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.