Gudlanarasimhanahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಗುಡ್ಲನಾರಸಿಂಹನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಶ್ರೀ ಶಾರದಾ ಪೂಜೆ ಹಾಗೂ ಅಕ್ಷರಾಂಕುರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಶಿಕ್ಷಕಿ ಸುಜಾತ ಮಾತನಾಡಿ, “ಮಕ್ಕಳಿಗೆ ತಾಯಿಯೇ ಮೊದಲ ಗುರು ಎಂಬ ನಂಬಿಕೆಯಿಂದ, ನಮ್ಮ ಶಾಲೆಗೆ ಹೊಸದಾಗಿ ಸೇರುವ ಮಕ್ಕಳು ತಾಯಂದಿರ ಸಹಾಯದಿಂದ ಅಕ್ಕಿಯಲ್ಲಿ ‘ಓಂ’ ಬರೆಯುವ ಮೂಲಕ ಅಕ್ಷರಾಭ್ಯಾಸ ಆರಂಭಿಸಿದರು. ವಿದ್ಯಾ ದೇವಿ ಶ್ರೀ ಶಾರದಾ ಪೂಜೆ ನೆರವೇರಿಸಿ ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂಬ ಆಶಯದಿಂದ ಪೋಷಕರು ಮಕ್ಕಳನ್ನು ಪ್ರೀತಿಯಿಂದ ಆಶೀರ್ವದಿಸಿದರು” ಎಂದು ವಿವರಿಸಿದರು.
“ನಮ್ಮ ಶಾಲೆಯಲ್ಲಿ ಪ್ರಥಮ ಬಾರಿಗೆ ಅಕ್ಷರಾಂಕುರ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಇದರಿಂದ ಪೋಷಕರಿಗೆ ಸಂತಸವಾಗಿದೆ. ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಉತ್ತಮವಾಗಿದ್ದು, ನಮ್ಮಲ್ಲಿ ನುರಿತ ಶಿಕ್ಷಕರು ಗುಣಾತ್ಮಕ ಶಿಕ್ಷಣ ನೀಡಲು ಸಿದ್ಧರಿದ್ದಾರೆ. ಶಿಕ್ಷಣದ ಜೊತೆಗೆ ಕಂಪ್ಯೂಟರ್ ಜ್ಞಾನ, ಮೌಲ್ಯ ಶಿಕ್ಷಣ, ಜೀವನ ಶಿಕ್ಷಣ, ಯೋಗ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಗ್ರಾಮದ ಎಲ್ಲರೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕೆಂದು ಮನವಿ ಮಾಡಲಾಗಿದೆ” ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷೆ ನಂದಿನಿ, ಶಿಕ್ಷಕ ಎಸ್.ಎ.ನರಸಿಂಹರಾಜು, ಅಂಗನವಾಡಿ ಶಿಕ್ಷಕಿ ಪ್ರಮೀಳ ಹಾಗೂ ಪೋಷಕರಾದ ಲಕ್ಷ್ಮಿ, ಶೈಲಜ, ಕಾವ್ಯ, ಭಾಗ್ಯಮ್ಮ, ವೀಣಾ ಪಾಲ್ಗೊಂಡಿದ್ದರು.