Gudihalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಗುಡಿಹಳ್ಳಿಯ ಶ್ರೀ ಪಾರ್ವತಾಂಬಾ ಸಮೇತ ಶ್ರೀ ಸೋಮೇಶ್ವರಸ್ವಾಮಿ ದೇವಾಲಯದ 17ನೇ ವರ್ಷದ ಬ್ರಹ್ಮರಥೋತ್ಸವವು ಗುರುವಾರ ಭಕ್ತಿಭಾವಪೂರ್ಣ ವಾತಾವರಣದಲ್ಲಿ ನೆರವೇರಿತು. ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಸಾವಿರಾರು ಭಕ್ತರು ಈ ಪುಣ್ಯಕರ್ಮಕ್ಕೆ ಸಾಕ್ಷಿಯಾಗಿದ್ದು, ಭಕ್ತಿ ಹಾಗೂ ಸಂಭ್ರಮದ ಜಾತ್ರೆಗೆ ತೊಡಗಿಕೊಂಡರು.
ಬ್ರಹ್ಮರಥೋತ್ಸವದ ಅಂಗವಾಗಿ ದೇವರಿಗೆ ವೈಶಿಷ್ಟ್ಯಪೂರ್ಣ ಹೂವಿನ ಅಲಂಕಾರ ಮಾಡಿ ಸಿಂಗರಿಸಲಾಯಿತು. ವಿವಿಧ ಧಾರ್ಮಿಕ ವಿಧಿವಿಧಾನಗಳಾದ ವಿಶೇಷ ಪೂಜೆ, ಹೋಮ-ಹವನ, ಕಳಶ ಪೂಜೆ, ಗಣಪತಿ ಪೂಜೆ ನೆರವೇರಿಸಿದ ಬಳಿಕ ಮಹಾ ಮಂಗಳಾರತಿ ನೆರವೇರಿಸಿ ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗಿಸಲಾಯಿತು.
ಗುಡಿಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಹೆಣ್ಣುಮಕ್ಕಳು ದೀಪಗಳನ್ನು ಹೊತ್ತುಕೊಂಡು ಮೆರವಣಿಗೆ ನಡೆಸಿ ದೇವರಿಗೆ ಆರತಿ ಎತ್ತಿದ ಕ್ಷಣ ಭಕ್ತಿಭಾವದ ಪರಾಕಾಷ್ಠೆಯಾಗಿತ್ತು. ವೀರಗಾಸೆ ಕಲಾತಂಡದ ಸಾಂಸ್ಕೃತಿಕ ಪ್ರದರ್ಶನ ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿತು.
ಶಾಸಕ ಬಿ.ಎನ್.ರವಿಕುಮಾರ್, ತಹಶೀಲ್ದಾರ್ ಬಿ.ಎನ್.ಸ್ವಾಮಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಂಕ್ ಮುನಿಯಪ್ಪ, ಕಾಂಗ್ರೆಸ್ ಮುಖಂಡ ರಾಜೀವ್‌ಗೌಡ ಸೇರಿದಂತೆ ಸ್ಥಳೀಯ ಗಣ್ಯರು ಮತ್ತು ಸಾವಿರಾರು ಭಕ್ತರು ಈ ದಿವ್ಯ ಘಳಿಗೆಗೆ ಸಾಕ್ಷಿಯಾದರು.