ಶಿಡ್ಲಘಟ್ಟ ತಾಲ್ಲೂಕಿನ ಅಬ್ಲೂಡು ಗ್ರಾಮ ಪಂಚಾಯಿತಿ ಗುಡಿಹಳ್ಳಿ ಗ್ರಾಮದ ಶ್ರೀಪಾರ್ವತಾಂಬ ಸಮೇತ ಶ್ರೀಸೋಮೇಶ್ವರಸ್ವಾಮಿ ದೇವಾಲಯದ 13 ನೇ ವರ್ಷದ ಬ್ರಹ್ಮರಥೋತ್ಸವಕ್ಕೆ ತಹಶೀಲ್ದಾರ್ ಬಿ.ಎಸ್.ರಾಜೀವ್ ಚಾಲನೆ ನೀಡಿದರು.
ದೇವರ ಆರ್ಶಿವಾರ್ವಾದದಿಂದ ಗುಡಿಹಳ್ಳಿ ಕೆರೆಗೆ ಶೇಕಡ 40 ರಷ್ಟು ಈಗಾಗಲೆ ನೀರು ಬಂದಿದೆ. ಇದರಿಂದ ಅಂತರ್ಜಲ ಅಭಿವೃದ್ದಿಯಾಗಿ ಎಲ್ಲಾ ರೈತ ಬಾಂಧವರು ತ್ತಮ ಬೆಳೆ ಬೆಳೆಯುವಂತಾಗಲಿ. ಗುಡಿಹಳ್ಳಿ ದೇವಸ್ಥಾನದಲ್ಲಿ ಶಿವನಿಗೆ ಕುಂಬಾಭಿಷೇಕ ಮಾಡಿದಾಗ ಇಲ್ಲಿ ಮಳೆ ಬರುತ್ತದೆ, ಕೆರೆ ತುಂಬುತ್ತೆ ಎಂಬ ನಂಬಿಕೆ ಹಳೆ ಕಲದಿಂದಲೂ ಇದೆ. ರೈತರ ನಂಬಿಕೆಯಂತೆ ಶಿವ ಹಾರೈಸಿದರೆ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದು ಈ ಸಂದರ್ಭದಲ್ಲಿ ಅವರು ತಿಳಿಸಿದರು.
ಕಾಂಗ್ರೆಸ್ ಮುಖಂಡ ಪುಟ್ಟು ಆಂಜಿನಪ್ಪ ಮಾತನಾಡಿ, ಬ್ರಹ್ಮರಥೋತ್ಸವದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸುವುದರಿಂದ ನಾಡು ಸುಭಿಕ್ಷವಾಗುತ್ತದೆ ಎಂಬ ನಂಬಿಕೆ ಇದೆ. ಈ ವರ್ಷ ತಾಲ್ಲೂಕಿನಾದ್ಯಂತಹ ಉತ್ತಮ ಮಳೆ, ಬೆಳೆಯಾಗಿ, ಆರೋಗ್ಯ ಅಷ್ಟೈಶ್ವರ‍್ಯ ಲಭಿಸಲಿ, ಜನತೆ ಸುರಕ್ಷೆಯಿಂದ ಬಾಳುವಂತಾಗಲಿ ಎಂದು ಹಾರೈಸಿದರು.
ಬ್ರಹ್ಮರಥೋತ್ಸವದ ಅಂಗವಾಗಿ ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ಸಿಂಗರಿಸಲಾಗಿತ್ತು. ಆಗಮಿಕ ಪಂಡಿತರಾದ ಗಣೇಶ ದೀಕ್ಷಿತ್, ನಂಜುಂಡಯ್ಯ, ನಾಗೇಂದ್ರರವರ ನೇತೃತ್ವದಲ್ಲಿ ವಿಶೇಷ ಪೂಜೆ, ಹೋಮ-ಹವನ, ಕಳಶ ಪೂಜೆ, ಗಣಪತಿ ಪೂಜೆ ಹಾಗೂ ರುದ್ರಾಭಿಷೇಕ, ಮುಂತಾದ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲಾಯಿತು.
ಶಿಡ್ಲಘಟ್ಟ ನಗರ ಹಾಗೂ ಸುತ್ತಮುತ್ತಲಿನ ಸಾವಿರಾರು ಗ್ರಾಮಸ್ಥರು ರಥೋತ್ಸವದಲ್ಲಿ ಭಾಗಿಯಾಗಿದ್ದರು. ಗುಡಿಹಳ್ಳಿ ಮತ್ತು ಸುತ್ತಲಿನ ಗ್ರಾಮಗಳ ಹೆಣ್ಣುಮಕ್ಕಳು ದೀಪಗಳನ್ನು ಹೊತ್ತು ಮೆರವಣಿಗೆ ನಡೆಸಿ ದೇವರಿಗೆ ಆರತಿ ಎತ್ತಿದರು. ವೀರಗಾಸೆ ಕಲಾತಂಡ ಮೆರವಣಿಗೆಗೆ ಮೆರುಗನ್ನು ತಂದಿತ್ತು.
ದೇವಾಲಯ ಸಂಚಾಲಕ ಚನ್ನಕೃಷ್ಣಪ್ಪ, ಕೆ.ಪಿ.ಸಿ.ಸಿ ಸದಸ್ಯ ನಾರಾಯಣಸ್ವಾಮಿ(ಬಂಗಾರು), ಜೆ.ಡಿ.ಎಸ್.ಮುಖಂಡ ಬಿ.ಎನ್.ರವಿಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ.ನಿರ್ಮಲ ಎನ್.ಬೈರೇಗೌಡ, ಪಿಎಲ್‌ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಜಿ.ವಿ.ಮುನಿವೆಂಕಟಸ್ವಾಮಿ, ಜಿ.ಎಂ.ದೇವಪ್ಪ, ಜಿ.ಎನ್.ಬಚ್ಚರಾಯಪ್ಪ, ಜಿ.ಎನ್.ಚಂದ್ರನಾಥ, ಮಂಜುನಾಥ್, ಪ್ರೆಸ್ ನಾರಾಯಣಸ್ವಾಮಿ, ರಾಜ್ಯ ರೈತ ಸಂಘದ ಪ್ರಧಾನಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ರಾ.ರೈ.ಸಂಘದ ನಗರ ಘಟಕದ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ಕೋಲಾರ ಡಾ.ರಮೇಶ್ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.