Sidlaghatta : ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಅಗತ್ಯ ಮೂಲಭೂತ ಸವಲತ್ತುಗಳಿದ್ದರೂ ಮುಚ್ಚುವ ಹಂತ ತಲುಪುತ್ತಿರುವುದು ಆತಂಕಕಾರಿ ವಿಚಾರವಾಗಿದೆ. ಸರ್ಕಾರಿ ಶಾಲೆಗಳ ಅಳಿವು ಉಳಿವು ಶಾಲಾ ಶಿಕ್ಷಕರು ಹಾಗೂ ಪೋಷಕರ ಕೈಯಲ್ಲಿದೆ ಎಂದು ನಗರಸಭೆ ಪೌರಾಯುಕ್ತ ಮೋಹನ್‌ಕುಮಾರ್.ವಿ. ಹೇಳಿದರು.
ನಗರದ ಸಿದ್ದಾರ್ಥನಗರ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪುತ್ತಿರುವುದು ದುರದೃಷ್ಟಕರ. ಶಿಕ್ಷಕರು, ಮಕ್ಕಳು ಹಾಗೂ ಪೋಷಕರು ಕೈ ಜೋಡಿಸಿದರೆ ಮಾತ್ರ ಈ ಶಾಲೆಗಳನ್ನು ಉಳಿಸಬಹುದಾಗಿದೆ. ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ಕಲಿಸುವ ಜವಾಬ್ದಾರಿ ಶಿಕ್ಷಕರದ್ದು. ಇಂದು ಸ್ಪರ್ಧಾತ್ಮಕ ಯುಗದಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನೂ ಪ್ರೋತ್ಸಾಹಿಸಬೇಕು,” ಎಂದು ಸಲಹೆ ನೀಡಿದರು.
ಸಾಮಾನ್ಯವಾಗಿ ಖಾಸಗಿ ಶಾಲೆಗಳು ಶಾಲಾ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತವೆ. ಆದರೆ ಬಡಾವಣೆ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರು, ಸಿಬ್ಬಂದಿ, ಪೋಷಕರು ಹಾಗೂ ಎಸ್.ಡಿ.ಎಂ.ಸಿ ಸಹಕಾರ ಪಡೆದು ಅದೇ ರೀತಿ ಆರ್ಭಟದಿಂದ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಗಂಗರಾಜು ಮಾತನಾಡಿ, “ಮಕ್ಕಳಿಗೆ ವೇದಿಕೆ ಕಲ್ಪಿಸಿಕೊಡದಿದ್ದರೆ ನೀಡುವ ಶಿಕ್ಷಣ ಅರ್ಥಹೀನವಾಗುತ್ತದೆ. ಈ ಶಾಲೆಯನ್ನು ಉಳಿಸಲು ನಾವೂ ಕೆಲವು ಯೋಜನೆಗಳನ್ನು ರೂಪಿಸಿದ್ದೇವೆ. ಈ ವಾರ್ಷಿಕೋತ್ಸವ ಕೂಡ ಅದರ ಪೂರ್ವಭಾವಿ ಪ್ರಯತ್ನವಾಗಿದೆ. ಹಳೆಯ ವಿದ್ಯಾರ್ಥಿಗಳು ಮತ್ತು ಸ್ಥಳೀಯರು ಮುಂದಿನ ವರ್ಷದಿಂದ ಇನ್ನಷ್ಟು ಅದ್ದೂರಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಬಹುದು,” ಎಂದರು. ಪೋಷಕರ ಸಹಕಾರದಿಂದ ಈ ವರ್ಷ ಶಾಲಾ ವಾರ್ಷಿಕೋತ್ಸವ ಅತ್ಯಂತ ಯಶಸ್ವಿಯಾಗಿ ನಡೆಸಲು ಸಾಧ್ಯವಾಯಿತು ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಶಾಲಾ ಮಕ್ಕಳಿಂದ ನಡೆದ ವಿವಿಧ ನೃತ್ಯಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ಭುತವಾಗಿ ಮೂಡಿಬಂದವು. ಮಕ್ಕಳ ರಸಮಂಜರಿ ಕಾರ್ಯಕ್ರಮದಿಂದ ವೀಕ್ಷಕರನ್ನು ಆಕರ್ಷಿಸಿತು.
ಈ ಸಂದರ್ಭ ಸಿ.ಆರ್.ಪಿ ಬಾಬು, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಮಂಜುಳಮ್ಮ, ನಗರಸಭೆ ಸದಸ್ಯ ಎನ್.ಕೃಷ್ಣಮೂರ್ತಿ, ಮುಖ್ಯ ಶಿಕ್ಷಕ ಮೊಹಮ್ಮದ್ ಹುಸೇನ್, ಶಿಕ್ಷಕರಾದ ನಗೀನ, ಅನುಜಾ ಹಾಗೂ ಶಾಲಾ ಸಿಬ್ಬಂದಿ, ಹಳೆಯ ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.