Hosapete, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಹೊಸಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಪದ್ಮಜಾ ಅವರಿಗೆ ರಾಯಚೂರಿನ ಕಲಾಸಂಕುಲ ಸಂಸ್ಥೆಯು ಶಿಕ್ಷಕರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
ಪದ್ಮಜಾ ಅವರು ಆರಂಭದಲ್ಲಿ ಶಿಶುವಿಹಾರದ ಶಿಕ್ಷಕಿಯಾಗಿ ಆಯ್ಕೆಯಾಗಿ ನಂತರ ಶಾಲಾಮಾತೆ ಶಿಕ್ಷಕಿಯಾಗಿ ಹೊಸಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ ನಲಿಕಲಿ ವಿದ್ಯಾರ್ಥಿಗಳಿಗೆ ಚಟುವಟಿಕೆ ಆಧಾರಿತವಾಗಿ ಕಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಸೇವೆಯನ್ನು ಗುರ್ತಿಸಿ ಶಿಕ್ಷಕರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ರಾಯಚೂರಿನ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವರಾದ ಎನ್.ಎಸ್.ಬೋಸರಾಜು, ಪದ್ಮಶ್ರೀ ಪುರಸ್ಕೃತ ಅಕ್ಷರಸಂತ ಹರೇಕಳ ಹಾಜಬ್ಬ, ಕಿರು ತೆರೆ ಡಾ.ರಜಿನಿ, ಮಂಗಳೂರು ಪೆರುವಾಯಿ ಗ್ರಾಮಪಂಚಾಯಿತಿ ಅಧ್ಯಕ್ಷೆ ನಫೀಸಾ, ಕಲಾಸಂಕುಲ ಸಂಕುಲ ಸಂಸ್ಥೆಯ ಅಧ್ಯಕ್ಷೆ ರೇಖಾ ಬಡಿಗೇರ್, ಕಾರ್ಯದರ್ಶಿ ಮಾರುತಿ ಬಡಿಗೇರ್ ಹಾಜರಿದ್ದರು.
ಶಿಕ್ಷಕಿ ಪದ್ಮಜಾ ಅವರನ್ನು ಹೊಸಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಜಿ.ಎನ್.ನೇತ್ರಾವತಿ, ಶಿಕ್ಷಕಿ ಎನ್.ಶೈಲಜಾ, ರೇಖಾರಾಣಿ, ಸಿಆರ್‌ಪಿ ರಮೇಶ್ ಕುಮಾರ್, ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ, ಅಭಿನಂದಿಸಿದ್ದಾರೆ.