Cheemangala, Sidlaghatta : ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸಿ ದೈಹಿಕ ಬೆಳವಣಿಗೆ ವೃದ್ಧಿಸಬೇಕಿದೆ. ಆ ಮೂಲಕ ಮಾನಸಿಕ ಸ್ವಾಸ್ಥ್ಯ ಹೆಚ್ಚಿದಾಗ ಕಲಿಕೆಯು ಸುಲಭ ಸಾಧ್ಯ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಸಿ.ಎ.ನರೇಂದ್ರಕುಮಾರ್ ತಿಳಿಸಿದರು.
ತಾಲ್ಲೂಕಿನ ಚೀಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ಅಜೀಂಪ್ರೇಮ್ ಜಿ ಫೌಂಡೇಶನ್‌ನಿಂದ ವಾರಪೂರ್ತಿ ಎಲ್ಲಾ ದಿನಗಳಲ್ಲಿಯೂ ವಿದ್ಯಾರ್ಥಿಗಳಿಗೆ ಉಚಿತ ಮೊಟ್ಟೆ, ಚಿಕ್ಕಿ, ಬಾಳೆಹಣ್ಣು ವಿತರಿಸುವ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ಕಾರವು ಮಕ್ಕಳ ಭೌತಿಕ ಮತ್ತು ಭೌದ್ಧಿಕ ಬೆಳವಣಿಗೆಗೆ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಸರ್ಕಾರಿ ಶಾಲೆಗಳಲ್ಲಿ ಗ್ರಾಮೀಣ ಮಕ್ಕಳ ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಲಾಗಿದ್ದು ಮಕ್ಕಳ ಕಲಿಕಾಪ್ರಗತಿ, ದೈಹಿಕ ಮಾನಸಿಕ ಬೆಳವಣಿಗೆಯಲ್ಲಿ ಪೋಷಕರು ಮತ್ತು ಶಿಕ್ಷಕರು ಹೆಚ್ಚು ಗಮನವಹಿಸಬೇಕು ಎಂದರು.
ತಾಲ್ಲೂಕು ಅಕ್ಷರದಾಸೋಹ ಸಹಾಯಕ ನಿರ್ದೇಶಕ ಆಂಜನೇಯ ಮಾತನಾಡಿ, ಪೋಷಣ್ ಶಕ್ತಿನಿರ್ಮಾಣ್ ಯೋಜನೆಯಡಿ ಮಕ್ಕಳಿಗೆ ಬೇಕಾದ ಎಲ್ಲಾ ಪೋಷಕಾಂಶಯುತ ಆಹಾರವನ್ನು ಸರ್ಕಾರಿ ಶಾಲೆಗಳಲ್ಲಿ ಒದಗಿಸಲಾಗುತ್ತಿದೆ. ಮಕ್ಕಳಿಗೆ ಸಮತೋಲನ ಆಹಾರ ನೀಡುತ್ತಿರುವುದಲ್ಲದೇ ಹಾಲು, ಮೊಟ್ಟೆ, ಶೇಂಗಾ ಚಿಕ್ಕಿ, ಬಾಳೆಹಣ್ಣು ವಿತರಿಸಲಾಗುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಳ, ಬೆಳವಣಿಗೆ ಮತ್ತು ವಿಕಾಸದ ಮೇಲೆ ಉತ್ತಮ ಪರಿಣಾವುಂಟಾಗಿದೆ. ಈಗಾಗಲೇ ಸರ್ಕಾರ ಅನುದಾನದಲ್ಲಿ ಮಂಗಳವಾರ ಮತ್ತು ಶುಕ್ರವಾರದಂದು ಮೊಟ್ಟೆ ನೀಡಲಾಗುತ್ತಿತ್ತು. ವಾರದಲ್ಲಿ ಉಳಿದ ಸೋಮ, ಬುಧ, ಗುರು, ಶನಿವಾರದಂದು ಅಜೀಂಪ್ರೇಮ್ ಜಿ ಫೌಂಡೇಶನ್ ಅನುದಾನದಲ್ಲಿ ನಾಲ್ಕು ದಿನಗಳ ಮೊಟ್ಟೆ, ಶೇಂಗಾಚಿಕ್ಕಿ, ಬಾಳೆಹಣ್ಣು ವಿತರಿಸಲಾಗುವುದು ಎಂದರು.
ಚೀಮಂಗಲ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಎಸ್.ಶಿವಶಂಕರ್ ಮಾತನಾಡಿ, ವಿದ್ಯಾರ್ಥಿಗಳು ಜಂಕ್ ಫುಡ್ ಕಡೆಗೆ ಒಲವು ತೋರದೇ ಹಣ್ಣು, ತರಕಾರಿ, ಮೊಟ್ಟೆ, ಸೊಪ್ಪು ಮತ್ತಿತರ ಉತ್ತಮ ಆಹಾರಪದಾರ್ಥಗಳನ್ನು ಹೆಚ್ಚೆಚ್ಚು ತಿನ್ನುವುದರಿಂದ ಜ್ಞಾಪಕ ಶಕ್ತಿ ಹೆಚ್ಚಳ, ಸೋಮಾರಿತನ ದೂರವಾಗಿ ಕಲಿಯಲು ಬೇಕಾದ ಮಾನಸಿಕ ಸಾಮರ್ಥ್ಯ ವೃದ್ಧಿಯಾಗುತ್ತದೆ. ವಿದ್ಯಾರ್ಥಿದಿಸೆಯಿಂದಲೇ ಉತ್ತಮ ಆರೋಗ್ಯಕ್ರಮಗಳನ್ನು ಅನುಸರಿಸುವ ಅಗತ್ಯವಿದೆ ಎಂದರು.
ವಿದ್ಯಾರ್ಥಿಗಳಿಗೆ ಮೊಟ್ಟೆ, ಶೇಂಗಾಚಿಕ್ಕಿ, ಬಾಳೆಹಣ್ಣು ವಿತರಿಸಲಾಯಿತು.
ಚೀಮಂಗಲ ಗ್ರಾಮಪಂಚಾಯಿತಿ ಅಧ್ಯಕ್ಷೆ ಸರಸ್ವತಮ್ಮ, ಎಸ್.ಡಿ.ಎಂ.ಸಿ ಅಧ್ಯಕ್ಷ ಉಮೇಶ್, ಬಿಆರ್‌ಪಿ ಕೆ.ಮಂಜುನಾಥ್ ಮಾತನಾಡಿದರು,
ಸಿ.ಆರ್.ಪಿ ಹೇಮಲತಾ, ನಿವೃತ್ತ ಮುಖ್ಯಶಿಕ್ಷಕ ಸಿ.ಎಂ.ಮುನಿರಾಜು, ಶಿಕ್ಷಕ ಎಂ.ಶಿವಕುಮಾರ್, ನವೀನ್‌ಕುಮಾರ್, ಶ್ರೀನಿವಾಸ್, ಎಸ್.ಡಿ.ಎಂ.ಸಿ ಸದಸ್ಯರು ಹಾಜರಿದ್ದರು.