ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ವಿಶ್ವ ಕ್ಯಾನ್ಸರ್ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಅರಿವು ಮೂಡಿಸುವ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಭಯಾನಕ ಕ್ಯಾನ್ಸರ್ ರೋಗ ಇಂದು ಮಾನವ ನೆಮ್ಮದಿಯನ್ನು ಕಸಿದುಕೊಳ್ಳುತ್ತಿದೆ. ವೈದ್ಯಲೋಕ ಸಾಹಸಪಟ್ಟು ಚಿಕಿತ್ಸೆ ನೀಡಿದರೂ ಕ್ಯಾನ್ಸರ್ ಪೀಡಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ ಎಂದು ಅವರು ತಿಳಿಸಿದರು.
ಕ್ಯಾನ್ಸರ್ ವಯಸ್ಸು, ಲಿಂಗ, ಜಾತಿ ಮತ ಭೇದವಿಲ್ಲದೆ ಎಲ್ಲ ಸ್ತರದ ಜನರನ್ನೂ ಕಾಡುವ ಹೆಮ್ಮಾರಿ. ದೇಹದಲ್ಲಿ ಅಸಹಜವಾಗಿ ಉತ್ಪತ್ತಿಯಾಗುವ ಜೀವಕೋಶಗಳಿಂದಾಗಿ ಕ್ಯಾನ್ಸರ್ ಉಂಟಾಗುತ್ತದೆ. ತಂಬಾಕುಸೇವನೆ, ಮದ್ಯಪಾನ, ವಿವಿಧ ರಾಸಾಯನಿಕಗಳಿಗೆ ಒಗ್ಗಿಕೊಳ್ಳುವುದು, ವಿಷಯುಕ್ತ ಗಾಳಿಯ ಸೇವನೆ ಹಾಗೂ ಕೆಲವು ವೈರಸ್ ಗಳಿಂದ ಕ್ಯಾನ್ಸರ್ ಬರುತ್ತದೆ. ಆದರೆ ಇದಕ್ಕೆ ಇಂಥದ್ದೇ ಕಾರಣ ಎಂದು ಖಚಿತವಾಗಿ ಹೇಳುವ ಹಾಗೂ ಇಲ್ಲ, ಕ್ಯಾನ್ಸರ್ ಸಂಪೂರ್ಣವಾಗಿ ಗುಣವಾಗಬಹುದು ಇಲ್ಲವೇ ಜೀವನವನ್ನೇ ಬಲಿ ತೆಗೆದುಕೊಳ್ಳಬಹುದು ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, ಕ್ಯಾನ್ಸರ್ ಕಾಯಿಲೆಗಳಲ್ಲಿ ಹೆಚ್ಚಾಗಿ ಸ್ತನಕ್ಯಾನ್ಸರ್, ಬಾಯಿಹುಣ್ಣು, ಗರ್ಭಕೋಶ ತೊಂದರೆ ಕಂಡುಬರುತ್ತದೆ. ಕ್ಯಾನ್ಸರ್ ರೋಗದ ವಿರುದ್ಧ ಜಾಗೃತಿ ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆ ಫೆಬ್ರುವರಿ 4 ಅನ್ನು ವಿಶ್ವ ಕ್ಯಾನ್ಸರ್ ದಿನವೆಂದು ಘೋಷಿಸಿದೆ. ವಿಶ್ವ ಕ್ಯಾನ್ಸರ್ ದಿನಾಚರಣೆಯ ಪ್ರಮುಖ ಉದ್ದೇಶ ಜಗತ್ತಿನಲ್ಲಿ ಕ್ಯಾನ್ಸರ್ ಬಗ್ಗೆ ಜಾಗೃತಿಯನ್ನು ಮೂಡಿಸುವುದು, ಜೊತೆಗೆ ಜನರಲ್ಲಿ ಈ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ತೆಗೆದು ಹಾಕುವುದಾಗಿದೆ. ಯಾವ ವ್ಯಕ್ತಿಗೆ ಯಾವ ಕಾಯಿಲೆ ಇದೆ ಅಥವಾ ಯಾವ ವ್ಯಕ್ತಿ ಕಾಯಿಲೆಗೆ ತುತ್ತಾಗುತ್ತಾನೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲದಂತಹ ದಿನಗಳಿವು. ಬದಲಾಗುತ್ತಿರುವ ಕಾಲದಲ್ಲಿ, ರೋಗಗಳು ಒಂದರ ನಂತರ ಒಂದರಂತೆ ಬರುತ್ತಿವೆ. ಜನರು ಹೆಚ್ಚು ಜಾಗೃತಿ ವಹಿಸಬೇಕು ಎಂದರು.
ಫೆಬ್ರುವರಿ 7 ನೇ ತಾರೀಖು ಬೆಂಗಳೂರಿನ ಶಂಕರ್ ಆಸ್ಪತ್ರೆಯಿಂದ ತಜ್ಞ ವೈದ್ಯರು ನಮ್ಮ ಶಿಡ್ಲಘಟ್ಟದ ಸರ್ಕಾರಿ ಆಸ್ಪತ್ರೆಗೆ ಬಂದು ಎಲ್ಲಾ ರೋಗಿಗಳಿಗೆ ಕ್ಯಾನ್ಸರ್ ಸಂಬಂಧಿಸಿದಂತೆ ಚಿಕಿತ್ಸೆ ನೀಡುವರು. ಎಲ್ಲರೂ ಸದುಪಯೋಗ ಪಡಿಸಿಕೊಳ್ಳಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವಾಣಿ, ಡಾ.ಮಂಜು ನಾಯಕ್, ಡಾ.ಮನೋಹರ್, ಡಾ.ಯಶವಂತ್, ಆರೋಗ್ಯ ನಿರೀಕ್ಷಕರಾದ ದೇವರಾಜ್, ಲೋಕೇಶ್, ಶಶಿಕುಮಾರ್, ಸಿಬ್ಬಂದಿ ಮುನಿರತ್ನಮ್ಮ, ನಂದಿನಿ, ಗೀತಾ, ಚೈತ್ರ, ವಿಜಯಮ್ಮ, ಆಫ್ರೋಜ್, ಧನಂಜಯ, ಆಶಾ ಕಾರ್ಯಕರ್ತೆಯರು ಹಾಜರಿದ್ದರು.