Sidlaghatta : ಭಾರತ ದೇಶದಲ್ಲಿರುವ ಪ್ರತಿಯೊಂದು ರಾಜ್ಯವು ತಮ್ಮದೇ ಆದ ವೈವಿಧ್ಯತೆಯನ್ನು ಹೊಂದಿದೆ ಎಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಮುರಳಿ ಆನಂದ್ ತಿಳಿಸಿದರು.
ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಕಚೇರಿ ಆವರಣದಲ್ಲಿ ಮಂಗಳವಾರ ಮಹಾರಾಷ್ಟ್ರದಲ್ಲಿ ರಾಷ್ಟ್ರೀಯ ಭಾವೈಕ್ಯತಾ ಸಾಂಸ್ಕೃತಿಕ ಯುವ ಶಿಬಿರದಲ್ಲಿ ಭಾಗವಹಿಸಿದ್ದ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ 11 ಮಂದಿ ಎನ್.ಎಸ್.ಎಸ್ ಸ್ವಯಂ ಸೇವಕರಿಗೆ ರಾಷ್ಟ್ರೀಯ ಶಿಬಿರದ ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆಗಳನ್ನು ವಿತರಿಸಿ ಅವರು ಮಾತನಾಡಿದರು.
ಭಾರತ ದೇಶವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ದೇಶವಾಗಿದೆ.ಇಲ್ಲಿ ನಾವು ಹಲವಾರು ಜನಾಂಗ,ಪಂಗಡ,ವೇಷ ಭೂಷಣ ಹಾಗೂ ಆಚಾರ ವಿಚಾರಗಳು ಬೇರೆ, ಬೇರೆ ಯಾಗಿದ್ದರೂ ಸಹ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಕೂಡಿ ಬಾಳುವುದೇ ಈ ನಮ್ಮ ದೇಶದ ಜನರಲ್ಲಿರುವ ರಾಷ್ಟ್ರೀಯ ಭಾವೈಕ್ಯತೆಗೆ ಇದು ಒಂದು ಉತ್ತಮ ಸಾಕ್ಷಿ ಯಾಗಿದೆ ಎಂದು ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ಎನ್.ಎಸ್.ಎಸ್ ಕಾರ್ಯಕ್ರಮಾ ಧಿಕಾರಿ ಡಾ.ಎನ್.ಎ.ಆದಿ ನಾರಾಯಣಪ್ಪ ಮಾತನಾಡಿ, ದೇಶದ ಹಿರಿಯ ಗಾಂಧಿ ವಾದಿ ಡಾ. ಎಸ್.ಎನ್. ಸುಬ್ಬರಾವ್ ರವರ 96ನೇ ವರ್ಷದ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಭಾವೈಕ್ಯತಾ ಸಾಂಸ್ಕೃತಿಕ ಯುವ ಶಿಬಿರವನ್ನು ನವ ದೆಹಲಿಯ ರಾಷ್ಟ್ರೀಯ ಯುವ ಯೋಜನೆ ಮತ್ತು ಮಹಾರಾಷ್ಟ್ರ ರಾಜ್ಯದ ಯುವಜನ ಸೇವಾಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ಮಹಾರಾಷ್ಟ್ರ ರಾಜ್ಯದ ಅಹಿಲ್ಯ ನಗರದ ಜೈನ್ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಆರು ದಿನಗಳ ಕಾಲ ಆಯೋಜಿಸಲಾಗಿತ್ತು.
ಈ ಶಿಬಿರದಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕ ಪಿ.ಎಮ್.ನವೀನ್ ಕುಮಾರ್ ರಾಜ್ಯದ ತಂಡದ ನಾಯಕತ್ವದಲ್ಲಿ ಎಸ್.ಮೀನಾಕ್ಷಿ, ಜೆ.ತೇಜಸ್ವಿನಿ, ಎಂ.ನಂದೀಶ್, ಟಿ.ಎಂ.ತರುಣ್, ಎ.ಅಭಿಷೇಕ್, ಎಂ.ಡಿ.ಮಧು, ಡಿ.ಪವನ್, ಎಸ್.ಮಧು, ಎಂ.ಅನ್ವೇಷ್ ಹಾಗೂ ಎನ್.ಎನ್. ಚನ್ನಕೇಶವ ಯಾದವ್ ಭಾಗವಹಿಸಿದ್ದರು. ಈ ಆರು ದಿನಗಳ ಕಾಲದ ಶಿಬಿರದಲ್ಲಿ ಪ್ರತಿದಿನ ಯುವ ಗೀತೆ, ಯೋಗ, ಧ್ಯಾನ, ಧ್ವಜಾರೋಹಣ, ರಾಷ್ಟ್ರಗೀತೆ ಹಾಗೂ ದೇಶಭಕ್ತಿ ಗೀತೆಗಳ ಗಾಯನ, ಶ್ರಮಧಾನ, ಭಾಷೆ, ಆಹಾರ ಮತ್ತು ಸಾಂಸ್ಕೃತಿಕ ವಿನಿಮಯ, ಪರಿಸರ ಅಧ್ಯಯನ, ಚರ್ಚಾಗೋಷ್ಠಿ, ಭಾರತ್ ಕೀ ಸಂತಾನ್ ನೃತ್ಯರೂಪಕ, ರಾಷ್ಟ್ರೀಯ ಭಾವೈಕ್ಯತೆ ಜಾತ ಹಾಗೂ ಗ್ರಾಮೀಣ ಕ್ರೀಡೆಗಳು ಮೊದಲಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು ಎಂದು ವಿವರಿಸಿದರು.
ವಿಶೇಷ ಪ್ರಶಸ್ತಿ: ಸ್ವಯಂಸೇವಕ ಡಿ.ಪವನ್ ನೀಡಿದ ರಾಜ್ಯದ ಕನ್ನಡ ಸಂಸ್ಕೃತಿ ಮತ್ತು ಪರಂಪರೆಯ ನೃತ್ಯರೂಪಕ ಕಲಾ ಪ್ರದರ್ಶನವು ಭಾರತ್ ಕೀ ಸಂತಾನ್ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಈ ಪ್ರಶಸ್ತಿಯನ್ನು ಮಹಾರಾಷ್ಟ್ರದ ಸಾಮಾಜಿಕ ಕಾರ್ಯಕರ್ತ ಪದ್ಮಶ್ರೀ ಪೋಪತ್ರಾವ್ ಬಾಗುಜಿ ಪವಾರ್ ರವರು ನೀಡಿ ಗೌರವಿಸಿದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಸಂಯೋಜಕ ಡಾ.ವಿ. ಪ್ರಶಾಂತ, ಉಪನ್ಯಾಸಕ ಮೊಹಮ್ಮದ್ ಸಾಧದ್ ಹಾಜರಿದ್ದರು.