ಶಿಡ್ಲಘಟ್ಟ ನಗರದ ಕಂದಾಯ ಭವನದ ಸಂಘದ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸರ್ವಸದಸ್ಯರ ವಾರ್ಷಿಕ ಮಹಾ ಸಭೆಯಲ್ಲಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ ಎನ್ ಸುಬ್ಬಾರೆಡ್ಡಿ ಮಾತನಾಡಿದರು.
ಸರ್ಕಾರಿ ನೌಕರರ ವೇತನದಲ್ಲಿ ತಾರತಮ್ಯವಾಗುತ್ತಿದೆ. ನೆರೆಯ ರಾಜ್ಯಗಳು ನೀಡುತ್ತಿರುವಷ್ಟು ಹಾಗೂ ಕೇಂದ್ರ ಸರ್ಕಾರ ನೀಡುತ್ತಿರುವ ವೇತನಕ್ಕೆ ಸಮನಾದ ವೇತನ ನೀಡದೆ 6 ಲಕ್ಷ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಿದೆ. ನೂತನ ವೇತನ ಆಯೋಗ ಮಾಡದೆ ಸರ್ಕಾರಿ ನೌಕರರು ಶೋಷಣೆಗೆ ಒಳಗಾಗಿದ್ದು ಸಂಘಟಿತರಾಗಿ ಹೋರಾಟಕ್ಕೆ ಸಜ್ಜಾಗಬೇಕೆಂದು ಅವರು ಕರೆ ನೀಡಿದರು.
ಶಿರಸ್ತೆದಾರ್ ಕೆ.ಎನ್.ಮಂಜುನಾಥ್ ಮಾತನಾಡಿ, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಆರು ಲಕ್ಷಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿ ಆಗಬೇಕಾಗಿದೆ. ಹಾಲಿ ನೌಕರರು ಹೆಚ್ಚಿನ ಕಾರ್ಯ ನಿರ್ವಹಿಸಬೇಕಾಗಿದೆ. ಇದರಿಂದ ಮಾನಸಿಕ ಮತ್ತು ದೈಹಿಕ ತೊಂದರೆಗೆ ಒಳಗಾಗುತ್ತಿದ್ದಾರೆ. ಪಿಂಚಣಿ ಯೋಜನೆಯ ಬಗ್ಗೆ ಯಾವುದೇ ಕ್ರಮ ತೆಗೆದು ಕೊಂಡಿಲ್ಲ. ಸರ್ಕಾರಿ ನೌಕರರ ಹೋರಾಟದ ಮೊದಲ ಹಂತವಾಗಿ ಶಾಸಕರಿಗೆ ಮನವಿ ನೀಡಿ ಸರ್ಕಾರದ ಗಮನಕ್ಕೆ ತರಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ನಿವೃತ್ತಿಯಾದ ಸರ್ಕಾರಿ ನೌಕರರನ್ನು ಸನ್ಮಾನಿಸಲಾಯಿತು.
ಶಿಕ್ಷಕರ ಸಂಘದ ಅಧ್ಯಕ್ಷ ಮುನಿರಾಜು, ಅಕ್ಕಲರೆಡ್ಡಿ, ಶಶಿಕುಮಾರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ, ಸಣ್ಣ ನೀರಾವರಿ ಇಲಾಖೆ ಕೇಶವಮೂರ್ತಿ, ಎನ್.ಪಿ.ಎಸ್ ನೌಕರರ ಸಂಘದ ಅಧ್ಯಕ್ಷ ಗಜೇಂದ್ರ ಉಪಸ್ಥಿತರಿದ್ದರು.