Sidlaghatta : ಶಿಡ್ಲಘಟ್ಟ ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ 8 ಹಾಸಿಗೆಗಳ ಸುಸಜ್ಜಿತ ಡಯಾಲಿಸಿಸ್ ಕೇಂದ್ರ ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ ಸಾಗುತ್ತಿದ್ದು, ಶೀಘ್ರದಲ್ಲೇ ತಾಲ್ಲೂಕಿನ ಜನತೆಗೆ ಈ ಸೇವೆ ಲಭ್ಯವಾಗಲಿದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ಭರವಸೆ ನೀಡಿದರು.
ಶನಿವಾರ ಆಸ್ಪತ್ರೆಗೆ ಭೇಟಿ ನೀಡಿ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದ ಅವರು, ಕ್ಷೇತ್ರದ ಅನೇಕ ಜನರು ಡಯಾಲಿಸಿಸ್ ಮಾಡಿಸಿಕೊಳ್ಳಲು ಬೇರೆ ತಾಲ್ಲೂಕು ಮತ್ತು ಜಿಲ್ಲೆಗಳಿಗೆ ತೆರಳುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ, ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಪ್ರತ್ಯೇಕವಾಗಿ 8 ಹಾಸಿಗೆಗಳ ಡಯಾಲಿಸಿಸ್ ಕೇಂದ್ರ ಸ್ಥಾಪಿಸಲು ಭೂಮಿ ಪೂಜೆ ನೆರವೇರಿಸಿದ್ದು, ಕಾಮಗಾರಿ ಜೋರಾಗಿ ಸಾಗುತ್ತಿದೆ ಎಂದು ತಿಳಿಸಿದರು. ಜೊತೆಗೆ ಆಸ್ಪತ್ರೆಗೆ ಬರುವ ರೋಗಿಗಳಿಗೆ ಅಗತ್ಯ ಮೂಲಭೂತ ಸವಲತ್ತುಗಳನ್ನು ಒದಗಿಸಲು ಹಾಗೂ ಆಸ್ಪತ್ರೆಯ ಕಾಂಪೌಂಡ್ ನಿರ್ಮಾಣ ಕಾರ್ಯವನ್ನೂ ಕೈಗೊಳ್ಳಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಆಡಳಿತ ವೈದ್ಯಾಧಿಕಾರಿ ಡಾ.ಮನೋಹರ್, ನಗರಸಭೆ ಅಧ್ಯಕ್ಷ ವೆಂಕಟಸ್ವಾಮಿ, ಜೆಡಿಎಸ್ ಮುಖಂಡರಾದ ಡಿ.ಎಂ.ಜಗದೀಶ್ವರ್, ಜೆ.ವಿ.ಸದಾಶಿವ, ತಾದೂರು ರಘು, ಎಸ್.ಸೋಮಶೇಖರ್ ಹಾಗೂ ಮತ್ತಿತರರು ಹಾಜರಿದ್ದರು.
ಆಶಾ ಸುಗಮಕಾರರ ಸೇವೆ ಮುಂದುವರಿಸುವಂತೆ ಮನವಿ

ಆಶಾ ಕಾರ್ಯಕರ್ತೆಯರ ಸಮರ್ಪಕ ಕಾರ್ಯನಿರ್ವಹಣೆಗೆ ಅಗತ್ಯವಾಗಿರುವ ಸುಗಮಕಾರರ ಹುದ್ದೆಗಳನ್ನು ನಿರಂತರವಾಗಿ ಮುಂದುವರಿಸಬೇಕು ಎಂಬ ಬೇಡಿಕೆಯನ್ನು ಆಶಾ ಕಾರ್ಯಕರ್ತೆಯರು ಶಾಸಕರಿಗೆ ಸಲ್ಲಿಸಿದರು.
ಪ್ರತಿ 20 ಆಶಾ ಕಾರ್ಯಕರ್ತೆಯರಿಗೆ ಒಬ್ಬರಂತೆ ಆಯ್ಕೆ ಮಾಡಲಾಗಿರುವ ಸುಗಮಕಾರರು, ಕಳೆದ 12 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. ತಕ್ಷಣದ ನಿರ್ಧಾರದಿಂದ ಅವರನ್ನು ಕೆಲಸದಿಂದ ವಜಾಗೊಳಿಸಿರುವ ಕ್ರಮ ಸರಿಯಲ್ಲ. ಹಾಗಾಗಿ ಸರ್ಕಾರ ಈ ಬಗ್ಗೆ ಗಮನಹರಿಸಿ, ಸುಗಮಕಾರರ ಸೇವೆ ಮುಂದುವರಿಸುವಂತೆ ಕ್ರಮ ಕೈಗೊಳ್ಳಬೇಕು ಎಂಬ ಮನವಿ ಶಾಸಕರಿಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಆಶಾ ಸುಗಮಕಾರರಾದ ಸರಸ್ವತಿ, ವೆಂಕಟಲಕ್ಷ್ಮಿ, ಶಿವಮ್ಮ, ಉಷಾ, ಕೆ.ಎಲ್.ಸುಜಾತ, ಶಶಿಕಲಾ.ವಿ, ಸುನಿತಾ, ವನಜಾಕ್ಷಿ ಸೇರಿದಂತೆ ಅನೇಕರು ಹಾಜರಿದ್ದರು.