Timmanayakanahalli, Sidlaghatta : ದೇವರಾಜು ಅರಸು ಅಭಿವೃದ್ದಿ ನಿಗಮದಿಂದ ಮಂಜೂರಾಗಿದ್ದ ಕೊಳವೆ ಬಾವಿಯನ್ನು ಕೊರೆಸದೆ ಡ್ರಿಲ್ಲಿಂಗ್ ಮಾಡಿದಂತೆ ಕೇಸಿಂಗ್ ಪೈಪನ್ನು ನಿಲ್ಲಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದ ಪ್ರಕರಣದಲ್ಲಿ ಫಲಾನುಭವಿ ರೈತ, ಬೋರ್‌ವೆಲ್ ಏಜೆನ್ಸಿ ಮತ್ತು ನಿಗಮದ ಜಿಲ್ಲಾ ಕಚೇರಿ ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಕೇಸು ದಾಖಲಿಸಲು ನಿಗಮದ ಕೇಂದ್ರ ಕಚೇರಿ ಅಧಿಕಾರಿಗಳು ಮುಂದಾಗಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನ ತಿಮ್ಮನಾಯಕನಹಳ್ಳಿಯ ರೈತ ನಾರಾಯಣಸ್ವಾಮಿಗೆ ದೇವರಾಜು ಅರಸು ಅಭಿವೃದ್ದಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಮಂಜೂರು ಆಗಿತ್ತು. ಆದರೆ ರೈತ ನಾರಾಯಣಸ್ವಾಮಿ ಕೊಳವೆಬಾವಿಯ ಡ್ರಿಲ್ಲಿಂಗ್ ಮಾಡಿಸಿಲ್ಲ. ಕೊಳವೆ ಬಾವಿ ಕೊರೆಸಿದಂತೆ ಕೇಸಿಂಗ್ ಪೈಪನ್ನು ಕೇವಲ 8 ಅಡಿ ಆಳಕ್ಕೆ ನಿಲ್ಲಿಸಿ ಸುತ್ತಲೂ ಎಂ ಸ್ಯಾಂಡ್ ಮಣ್ಣು ಗುಡ್ಡೆ ಹಾಕಿ ಡ್ರಿಲ್ಲಿಂಗ್ ಮಾಡಿದಂತೆ ಸೃಷ್ಟಿಸಿ ದಾಖಲೆಗಳನ್ನು ಸಲ್ಲಿಸಿ 1.9 ಲಕ್ಷ ರೂ.ಹಣವನ್ನು ಬೋರ್‌ವೆಲ್ ಏಜೆನ್ಸಿಗೆ ಅಧಿಕಾರಿಗಳು ಮಂಜೂರು ಮಾಡಿದ್ದರು.
ತಿಮ್ಮನಾಯಕನಹಳ್ಳಿ ಗ್ರಾಮದ ರೈತರು ನೀಡಿದ ದೂರಿನ ಮೇರೆಗೆ ದೇವರಾಜು ಅಭಿವೃದ್ದಿ ನಿಗಮದ ಕೇಂದ್ರ ಕಚೇರಿಯ ಎಇಇ ಬೈರಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಕೊರೆಸದ ಕೊಳವೆಬಾವಿಗೆ ಅಳವಡಿಸಿದ್ದ ವಿದ್ಯುತ್ ಟ್ರಾನ್ಸಫಾರ್ಮರ್‌ನ್ನು ತೆಗೆಯುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಹಾಗೆಯೆ ಕೊಳವೆಬಾವಿ ಕೊರೆಸದೆ ಡ್ರಿಲ್ಲಿಂಗ್ ಮಾಡಿದಂತೆ ಸ್ಥಳದಲ್ಲಿ ವಾತಾವರಣವನ್ನು ಸೃಷ್ಟಿಸಿದ ರೈತ ನಾರಾಯಣಸ್ವಾಮಿ, ರೈತನೊಂದಿಗೆ ಕೈ ಜೋಡಿಸಿದ ಬೋರ್‌ವೆಲ್ ಏಜೆನ್ಸಿಯವರ ವಿರುದ್ದ ಹಾಗೂ ಇದನ್ನು ಸರಿಯಾಗಿ ಪರಿಶೀಲಿಸದೆ ಕರ್ತವ್ಯ ನಿರ್ಲಕ್ಷ್ಯತೋರಿ ಡ್ರಿಲ್ಲಿಂಗ್ ಹಣವನ್ನು ಪಾವತಿಸಿದ ನಿಗಮದ ಜಿಲ್ಲಾ ವ್ಯವಸ್ಥಾಪಕರ ವಿರುದ್ದವೂ ಕ್ರಿಮಿನಲ್ ಕೇಸನ್ನು ದಾಖಲಿಸುವುದಾಗಿ ತಿಳಿಸಿದ್ದಾರೆ.
ಹಾಗೂ ಈಗಾಗಲೆ ಬಿಡುಗಡೆ ಆಗಿರುವ 1.9 ಲಕ್ಷ ರೂ.ಹಣವನ್ನು ರೈತ, ಬೋರ್‌ವೆಲ್ ಏಜೆನ್ಸಿ ಹಾಗೂ ಜಿಲ್ಲಾ ನಿಗಮದ ಕಚೇರಿ ಅಧಿಕಾರಿಗಳಿಂದಲೂ ವಸೂಲಿ ಮಾಡಿ ಸರಕಾರಕ್ಕೆ ಮರುಪಾವತಿಸಲು ಕ್ರಮ ಕೈಗೊಳ್ಳುವುದಾಗಿ ನಿಗಮದ ಕೇಂದ್ರ ಕಚೇರಿಯ ಎಇಇ ಬೈರಪ್ಪ ಅವರು ಸ್ಥಳೀಯ ದೂರುದಾರ ರೈತರಿಗೆ ಭರವಸೆ ನೀಡಿದ್ದಾರೆ.
ದೇವರಾಜು ಅರಸು ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಶಿವಾನಂದರೆಡ್ಡಿ, ರೈತ ಸಂಘದ ಪುಟ್ಟಣ್ಣಯ್ಯ ಬಣದ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ, ಜಿಲ್ಲಾ ಉಪಾಧ್ಯಕ್ಷ ತಿಮ್ಮನಾಯಕನಹಳ್ಳಿ ಅರುಣ್ ಕುಮಾರ್, ರೈತ ಮುಖಂಡ ಎಸ್.ಎಂ.ರವಿಪ್ರಕಾಶ್, BESCOM ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದರು.