Sidlaghatta : ಗಾಂಧೀಜಿ ಅವರು ಗ್ರಾಮ ಸ್ವರಾಜ್ಯದ ಮೂಲಕ ಹಳ್ಳಿಗಳ ಬೆಳವಣಿಗೆಗೆ ವಿಶೇಷ ಆಸಕ್ತಿ ಹೊಂದಿದ್ದರು. ದೇಶವನ್ನು ಎಲ್ಲ ರೀತಿಯಲ್ಲಿ ಸ್ವಚ್ಛವಾಗಿಡಲು ಅತ್ಯಂತ ಕಳಕಳಿ ಹೊಂದಿದ್ದರು. ಮಾಜಿ ಪ್ರಧಾನಿ ಲಾಲಬಹದ್ದೂರ ಶಾಸ್ತ್ರಿ ಅವರು ಹಾಲು ಮತ್ತು ಹಸಿರು ಕ್ರಾಂತಿಯ ಮೂಲಕ ದೇಶವನ್ನು ಅಭಿವೃದ್ಧಿಗೊಳಿಸುವ ಹಲವು ಕೊಡುಗೆ ನೀಡಿದ್ದಾರೆ ಎಂದು ಶಾಸಕ ಬಿ.ಎನ್.ರವಿಕುಮಾರ್ (BN Ravikumar) ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬುಧವಾರ ಆಯೋಜಿಸಿದ್ದ ಗಾಂಧಿ ಜಯಂತಿ (Gandhi Jayanti) ಕಾರ್ಯಕ್ರಮದಲ್ಲಿ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ, ಸ್ತ್ರೀಶಕ್ತಿ ಭವನದ ಹಿಂಭಾಗದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಿ ಅವರು ಮಾತನಾಡಿದರು.
ಅಹಿಂಸಾ ಪರಮೋಧರ್ಮ. ಶಾಂತಿ, ನೆಮ್ಮದಿ ಮತ್ತು ಸ್ವಚ್ಛತೆಯ ಪರಿಕಲ್ಪನೆ ನೀಡಿದ ಮಹಾತ್ಮ ಗಾಂಧೀಜಿ ಅವರ ಮಹತ್ವದ ಕೆಲವು ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕನ್ನು ಸಾರ್ಥಕಗೊಳಿಸಬೇಕಿದೆ ಎಂದು ಹೇಳಿದರು.
ನಗರದಲ್ಲಿ ಸ್ವಚ್ಛತೆಯನ್ನು ಕಾಪಾಡಲು ನಗರಸಭೆ ಅಧ್ಯಕ್ಷ ವೆಂಕಟಸ್ವಾಮಿ ಅವರು ಶ್ರಮವಹಿಸಿದ್ದಾರೆ. ಎಲ್ಲಾ ಸದಸ್ಯರೂ ಹಾಗೂ ಅಧಿಕಾರಿಗಳು ಸಹಕರಿಸಬೇಕು. ಸ್ವಚ್ಛನಗರ ಸುಂದರವಷ್ಟೇ ಅಲ್ಲ, ಆರೋಗ್ಯವಂತ ನಗರವಾಗುತ್ತದೆ. ಇದು ಒಬ್ಬರಿಂದಾಗುವ ಕೆಲಸವಲ್ಲ, ಎಲ್ಲರೂ ಒಗ್ಗೂಡಿ ಮಾಡಬೇಕಾಗಿದೆ ಎಂದು ಹೇಳಿದರು.
ತಹಶೀಲ್ದಾರ್ ಬಿ.ಎನ್.ಸ್ವಾಮಿ, ತಾಲ್ಲೂಕು ಪಂಚಾಯಿತಿ ಇಒ ಆರ್.ಹೇಮಾವತಿ, ನಗರಸಭೆ ಪೌರಾಯುಕ್ತ ಮಂಜುನಾಥ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಬಂಕ್ ಮುನಿಯಪ್ಪ, ಮೇಲೂರು ಮಂಜುನಾಥ್, ನಗರಸಭೆ ಅಧ್ಯಕ್ಷ ಎಂ.ವಿ.ವೆಂಕಟಸ್ವಾಮಿ, ಉಪಾಧ್ಯಕ್ಷೆ ರೂಪಾ ನವೀನ್, ಸದಸ್ಯರಾದ ಅನಿಲ್ ಕುಮಾರ್, ಮಂಜುನಾಥ್, ನಾರಾಯಣಸ್ವಾಮಿ ಹಾಜರಿದ್ದರು.