Sidlaghatta : ಶಿಡ್ಲಘಟ್ಟ ನಗರದ ಶ್ರೀ ವಾಸವಿ ವಿದ್ಯಾಸಂಸ್ಥೆಯ ಆವರಣದಲ್ಲಿ ಭಾನುವಾರ “ಬೃಹತ್ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ, ಕಣ್ಣಿನ ಪೊರೆ ಮತ್ತು ಇತರೆ ಕಣ್ಣಿನ ತೊಂದರೆಗಳಿಗೆ ಚಿಕಿತ್ಸೆ”ಯನ್ನು ಆಯೋಜಿಸಲಾಗಿತ್ತು.
ಮಳ್ಳೂರಿನ ಗೌರಮ್ಮ ಮಲ್ಲಶೆಟ್ಟಿ ಆರೋಗ್ಯ ಕೇಂದ್ರ, ರಾಮಯ್ಯ ವೈದ್ಯಕೀಯ ಕಾಲೇಜು ಆಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಹಾಗೂ ಜಿಲ್ಲಾ ಅಂಧತ್ವ ನಿವಾರಣ ವಿಭಾಗ ಸಹಯೋಗದಲ್ಲಿ ಈ ಶಿಬಿರವನ್ನು ಆಯೋಜಿಸಿದ್ದು, 300 ಮಂದಿಯ ಕಣ್ಣಿನ ಪರೀಕ್ಷೆ ಮಾಡಲಾಯಿತು.
ಕಣ್ಣಿನ ಶಸ್ತ್ರಚಿಕಿತ್ಸೆಗೆ ಅರ್ಹರಾದ 20 ಮಂದಿಯನ್ನು ಬೆಂಗಳೂರಿನ ರಾಮಯ್ಯ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಯಿತು. ಶಸ್ತ್ರಚಿಕಿತ್ಸೆಯಾದ ಬಳಿಕ ಉಚಿತವಾಗಿ ಔಷದೋಪಚಾರ ಹಾಗೂ ಕಪ್ಪು ಕನ್ನಡಕವನ್ನು ನೀಡಿ ವಾಪಸ್ ಹೊರಡಲು ವಾಹನ ಸೌಕರ್ಯವನ್ನು ಕಲ್ಪಿಸಲಾಗಿದೆ ಎಂದು ಆಯೋಜಕರು ತಿಳಿಸಿದರು.
ಶಿಬಿರದ ಆಯೋಜಕ ಡಾ.ಪೂವಾಡ ಸಂದೀಪ್ ಮಾತನಾಡಿ, “ಶಿಡ್ಲಘಟ್ಟ ನಗರದಲ್ಲಿ ಮಳ್ಳೂರಿನ ಗೌರಮ್ಮ ಮಲ್ಲಶೆಟ್ಟಿ ಆರೋಗ್ಯ ಕೇಂದ್ರದಿಂದ ನಡೆಸಿದ ಪ್ರಥಮ ಶಿಬಿರ ಇದು. ಜನರ ಪಾಲ್ಗೊಳ್ಳುವಿಕೆ ಹಾಗೂ ಸಹಕಾರ ನಿರೀಕ್ಷೆಗೂ ಮೀರಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಆರೋಗ್ಯ ಶಿಬಿರಗಳನ್ನು ಆಯೋಜನೆ ಮಾಡುತ್ತೇವೆ. ನಗರದ ಜನರು ಡಯಾಲಿಸಸ್ ಕೊರತೆಯಿದೆ ಎಂದು ತಿಳಿಸಿದ್ದಾರೆ. ಸೂಕ್ತವಾದ ರೀತಿಯಲ್ಲಿ ಚಿಕಿತ್ಸೆ ದೊರೆಯದೆ ಬಡ ಜನರು ಹಿಂಸೆ ಪಡುತ್ತಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ಸ್ಥಳೀಯ ಸ್ವಯಂ ಸೇವಾ ಸಂಸ್ಥೆ ಮತ್ತು ಆರ್ಯವೈಶ್ಯ ಮಂಡಳಿಯ ಹಾಗೂ ವಾಸವಿ ವಿದ್ಯಾಸಂಸ್ಥೆ ಯೊಂದಿಗೆ ಸಮಾಲೋಚನೆ ಮಾಡಿ ಖಾಯಂ ವ್ಯವಸ್ಥೆ ರೂಪಿಸಲಾಗುತ್ತದೆ” ಎಂದು ಹೇಳಿದರು.
ಜೆಡಿಎಸ್ ಮುಖಂಡ ಬಿ.ಎನ್.ಸಚಿನ್, ಶಂಕರ್, ಶ್ರೀಧರ, ಪ್ರಭು, ದೀಪು, ರೂಪಸಿರಮೇಶ್, ಟಿ.ಎ.ಕೃಷ್ಣಯ್ಯ ಶೆಟ್ಟಿ ಹಾಗೂ ಎಂ.ಎಸ್.ರಾಮಯ್ಯ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಹಾಜರಿದ್ದರು.