Sidlaghatta : ಮುಂಗಾರು ಮಳೆಗಾಲದಲ್ಲಿ ರೈತರು ತಮ್ಮ ಜಮೀನಿನಲ್ಲಿ ಮತ್ತು ಬದುಗಳಲ್ಲಿ ನೆಡಲು ಅರಣ್ಯ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಸಸಿಗಳನ್ನು ವಿತರಿಸಲು ಅರಣ್ಯ ಇಲಾಖೆ ಸನ್ನದ್ಧವಾಗಿದೆ. ಮೇ ತಿಂಗಳ ಅಂತ್ಯದಲ್ಲಿ ಅಥವಾ ಜೂನ್ ತಿಂಗಳ ಮೊದಲ ವಾರದಲ್ಲಿ ಸಸಿಗಳನ್ನು ರೈತರಿಗೆ ವಿತರಿಸಲಾಗುತ್ತದೆ.
ಈ ಕುರಿತು ಮಾಹಿತಿ ನೀಡಿದ ವಲಯ ಅರಣ್ಯಾಧಿಕಾರಿ ಎಸ್.ಸುಧಾಕರ್, ಮಹಾಘನಿ, ನುಗ್ಗೆ, ಕಾಡು ಬಾದಾಮಿ, ಕರಿಬೇವು, ಅಗಸೆ, ಟೀಕ್, ಸೀಬೆ ಇನ್ನಿತರೆ ಸಸಿಗಳನ್ನು ಬೆಳೆಸಿದ್ದು ಆಸಕ್ತ ರೈತರಿಗೆ 812 ಅಳತೆಯ ಬ್ಯಾಗ್‌ನಲ್ಲಿ ಬೆಳೆಸಿದ ಸಸಿಯನ್ನು 6 ರೂ, 69 ಅಳತೆಯ ಬ್ಯಾಗ್‌ನಲ್ಲಿ ಬೆಳೆಸಿದ ಸಸಿಯನ್ನು 3 ರೂ.ರಿಯಾಯಿತಿ ಬೆಲೆಗೆ ನೀಡಲಾಗುವುದು.
ಆಸಕ್ತ ರೈತರು ಪಹಣಿ, ಆಧಾರ್ ಕಾರ್ಡ್ ನಂಬರ್, ಮೊಬೈಲ್ ಸಂಖ್ಯೆ ನೀಡಿ ಸಸಿಗಳನ್ನು ಪಡೆಯಬಹುದು, ಒಂದು ಎಕರೆ ಜಮೀನು ಇರುವ ರೈತರಿಗೆ 100-150 ಗರಿಷ್ಠ ಸಂಖ್ಯೆಯ ಸಸಿಗಳನ್ನು ನೀಡಲಾಗುವುದು ಎಂದು ಅವರು ತಿಳಿಸಿದರು.
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ
ರೈತರು ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ(ಕೆಎಪಿವೈ)ಯಡಿ ರೈತರು 10 ರೂ.ಶುಲ್ಕ ನೀಡಿ ತಮ್ಮ ಹೆಸರನ್ನು ನೋಂದಾಯಿಸಬೇಕಾಗುತ್ತದೆ. ಈ ಯೋಜನೆಯಡಿ ರಿಯಾಯಿತಿ ದರದಲ್ಲಿ ಸಸಿಗಳನ್ನು ವಿತರಿಸಲಾಗುತ್ತದೆ. ರೈತರು ಆ ಸಸಿಗಳನ್ನು ನೆಟ್ಟು ಪೋಷಿಸಿದರೆ ಮುಂದಿನ ವರ್ಷ ಬೆಳೆಸಿದ ಪ್ರತಿ ಗಿಡಕ್ಕೆ 35 ರೂ, 2ನೇ ವರ್ಷದಲ್ಲಿ 40 ರೂ, ಮತ್ತು 3ನೇ ವರ್ಷದಲ್ಲಿ ಬೆಳೆದ ಪ್ರತಿ ಗಿಡಕ್ಕೂ 50 ರೂ.ಗಳನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ ಎಂದರು.
ರೈತರು ಪಹಣಿ, ಬ್ಯಾಂಕ್ ಖಾತೆ, ಆಧಾರ್ ಕಾರ್ಡ್, ಪಾಸ್ ಪೋರ್ಟ್ ಅಳತೆಯ ಎರಡು ಭಾವಚಿತ್ರಗಳನ್ನು ನೀಡಬೇಕಾಗುತ್ತದೆ, ಹೆಚ್ಚಿನ ವಿವರಗಳಿಗೆ ವರದನಾಯಕನಹಳ್ಳಿ ಗೇಟ್ ಬಳಿ ಇರುವ ವಲಯ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಯನ್ನು ಸಂಪರ್ಕಿಸಲು ಅವರು ಮನವಿ ಮಾಡಿದ್ದಾರೆ.