Sidlaghatta : Fengal ಚಂಡಮಾರುತದ ಪರಿಣಾಮವಾಗಿ ಕಳೆದ ಮೂರು ದಿನಗಳಿಂದ ಶಿಡ್ಲಘಟ್ಟದಲ್ಲಿ ಮೋಡ ಮುಸುಕಿದ ವಾತಾವರಣ ಮತ್ತು ನಿಲ್ಲದಂತೆ ಸುರಿಯುತ್ತಿರುವ ಜಡಿ ಮಳೆಯು ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿದೆ.
ಮುಂಗಾರು ಮತ್ತು ಹಿಂಗಾರು ಸಕಾಲಕ್ಕೆ ಮಳೆಯಿಲ್ಲದೇ ಬಿತ್ತನೆ ಕಡಿಮೆ ಆಗಿದ್ದ ಮಧ್ಯೆ, ಈಗ ಮುಂಗಾರಿನಲ್ಲಿ ಬೆಳೆದ ರಾಗಿ ಕಟಾವಿಗೆ ತಲುಪಿರುವುದರ ಮೊದಲೇ ಜಡಿ ಮಳೆಯಿಂದ ಹಾನಿ ಉಂಟಾಗುವ ಆತಂಕ ಕಾಡುತ್ತಿದೆ. ರಾಗಿ ನೆಲಕ್ಕುರುಳುವುದರಿಂದ ಕಾಳು ಮೊಳಕೆ ಹೊಡೆಯುವ ಭೀತಿಯಲ್ಲಿರುವ ರೈತರು, “ಕೈಗೆ ಬಂದ ತುತ್ತು ಬಾಯಿಗೆ ಬಾರದೆ ಹೋಗಬಹುದೇ?” ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ.
ಜಿಲ್ಲೆಯಲ್ಲಿ ಹೈನುಗಾರಿಕೆ ಮತ್ತು ರೇಷ್ಮೆ ಕೃಷಿ ಮೇಲೆ ಅವಲಂಬಿತ ಕುಟುಂಬಗಳಿಗೆ ಮೇವಿನ ಕೊರತೆ ತೀವ್ರವಾಗಿದೆ. ತೇವದಿಂದ ಕೂಡಿದ ಮೇವು ದನಗಳಿಗೆ ರೋಗ ತರುವ ಭಯದಿಂದ ರೈತರು ಒಣ ಮೇವು ಬಳಸುತ್ತಿದ್ದರೂ, ಹಲವು ಮಂದಿಗೆ ಒಣ ಮೇವು ದೊರೆಯುತ್ತಿಲ್ಲ. ಇದರ ಪರಿಣಾಮ ದನಕರು ಹಾಲು ನೀಡುವ ಪ್ರಮಾಣ ಕುಸಿತಗೊಳ್ಳುತ್ತಿರುವುದು ಹೊಸ ತೊಂದರೆ ತಂದಿದೆ.
ನಿಲ್ಲದ ತುಂತುರು ಮಳೆಯ ಕಾರಣ ಜನರು ಮನೆಯಲ್ಲೇ ಬಂಧಿತರಾಗಿದ್ದಾರೆ. ಸರ್ಕಾರಿ, ಖಾಸಗಿ ಕೆಲಸಕ್ಕೆ ಹೋಗುವವರ ಮೇಲೆ ಮಳೆಯು ಅಡ್ಡಿಯಾಗಿದೆ. ಕಚೇರಿಗಳಲ್ಲಿ ಕೆಲಸ ಕಾರ್ಯಗಳ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಬಹುತೇಕ ಸ್ಥಳಗಳಲ್ಲಿ ಜನರ ದಟ್ಟಣೆ ಕಾಣಲೇ ಇಲ್ಲ.
ನಗರದಲ್ಲಿಯೂ ಜನ ಸಂಚಾರ ವಿರಳವಾಗಿರುವುದರಿಂದ ವ್ಯಾಪಾರಸ್ಥರು ನಷ್ಟ ಅನುಭವಿಸುತ್ತಿದ್ದಾರೆ. ಅಂಗಡಿಗಳು, ಹೋಟೆಲ್ಗಳು ಖಾಲಿ ಇದ್ದು, ವ್ಯಾಪಾರ ಇಲ್ಲದೆ ಸಮಯ ಕಳೆಯುತ್ತಿದ್ದಾರೆ.
“ಫೆಂಜಲ್ ಚಂಡಮಾರುತದ ಈ ಪರಿಣಾಮ ಇನ್ನೆಷ್ಟು ದಿನ ಇರುತ್ತದೆ?” ಎಂಬ ಪ್ರಶ್ನೆ ಎಲ್ಲರ ಮೆದುಳನ್ನು ಕಾಡುತ್ತಿದ್ದು, ಜನರು ದಿನನಿತ್ಯದ ಜೀವನಕ್ಕೆ ಸಹಜ ಸ್ಥಿತಿಯನ್ನು ಪ್ರಾರ್ಥಿಸುತ್ತಿದ್ದಾರೆ.