Jangamakote, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿಯಲ್ಲಿ ಕೈಗಾರಿಕೆಗಳ ಸ್ಥಾಪನೆಗಾಗಿ ಕೆ.ಐ.ಎ.ಡಿ.ಬಿಯಿಂದ ಭೂ ಸ್ವಾಧೀನಕ್ಕೆ ಗುರ್ತಿಸಿರುವ ಜಮೀನುಗಳಲ್ಲಿ ಡ್ರೋಣ್ ಸರ್ವೆ ಕಾರ್ಯ ಆರಂಭಿಸಿದ್ದು, ರೈತರು ಡ್ರೋಣ್ ಅನ್ನು ವಶಪಡಿಸಿಕೊಂಡು ಪೊಲೀಸರಿಗೆ ಒಪ್ಪಿಸಿದ ಘಟನೆ ಶನಿವಾರ ನಡೆದಿದೆ.
ಶುಕ್ರವಾರವಷ್ಟೆ ನೂರಾರು ರೈತರು ಜಿಲ್ಲಾಧಿಕಾರಿಗಳ ಕಚೇರಿಗೆ ಟ್ರ್ಯಾಕ್ಟರ್‌ಗಳ ಮೂಲಕ ಜಾನುವಾರುಗಳ ಸಮೇತ ಮುತ್ತಿಗೆ ಹಾಕಿ ಕೈಗಾರಿಕೆಗಳ ಸ್ಥಾಪನೆಗಾಗಿ ಫಲವತ್ತಾದ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಆದೇಶವನ್ನು ಹಿಂದಕ್ಕೆ ಪಡೆಯಬೇಕೆಂದು ಬೃಹತ್ ಪ್ರತಿಭಟನೆ ನಡೆಸಿದ್ದರು.
ಪ್ರತಿಭಟನೆ ನಡೆದ ಮಾರನೇ ದಿನವೇ ಉದ್ದೇಶಿತ ಜಮೀನುಗಳಲ್ಲಿ ಡ್ರೋಣ್ ನಿಂದ ಸರ್ವೆ ಕಾರ್ಯ ನಡೆಸುತ್ತಿರುವುದು ರೈತರ ಕಣ್ಣಿಗೆ ಬಿದ್ದಿದೆ.
ಕೂಡಲೆ ಸ್ಥಳಕ್ಕೆ ತೆರಳಿದ ರೈತರು ಡ್ರೋಣ್ ಸರ್ವೆ ನಡೆಸುತ್ತಿರುವುದು ಯಾರು ? ಉದ್ದೇಶವಾದರೂ ಏನು ? ಸರ್ವೆಗೆ ಅನುಮತಿ ಕೊಟ್ಟವರು ಯಾರು? ಸ್ಥಳೀಯ ಅಧಿಕಾರಿಗಳು ಯಾರೂ ಇಲ್ಲದ್ದನ್ನು ಡ್ರೋಣ್ ಸರ್ವೆ ಮಾಡುತ್ತಿದ್ದವರನ್ನು ಪ್ರಶ್ನಿಸಿದ್ದಾರೆ.
ರೈತರ ಈ ಯಾವ ಪ್ರಶ್ನೆಗೂ ಅವರಿಂದ ಉತ್ತರ ಸಿಗಲಿಲ್ಲವಲ್ಲದೆ ಅವರ ನಡೆ ನುಡಿಗಳು ಅನುಮಾನ ಮೂಡಿಸಿದ್ದು ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದ್ದಾರೆ. ಕೂಡಲೆ ಅವರನ್ನು ಹಿಡಿದು ಅವರಿಂದ ಡ್ರೋಣ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಡ್ರೋಣ್ ಅನ್ನು ಅಲ್ಲೇ ಬಿಟ್ಟು ಸರ್ವೆ ಕಾರ್ಯಕ್ಕೆ ಬಂದಿದ್ದ ಇಬ್ಬರು ಯುವಕರು ಅಲ್ಲಿಂದ ಪರಾರಿಯಾಗಿದ್ದಾರೆ. ಶಿಡ್ಲಘಟ್ಟ ನಗರದಲ್ಲಿನ ರೈತ ಕಚೇರಿಗೆ ಡ್ರೋಣ್ ಅನ್ನು ತಂದು ಪೊಲೀಸರಿಗೆ ಮಾಹಿತಿ ನೀಡಿದ್ದು ರೈತ ಕಚೇರಿಗೆ ಬಂದ ಗ್ರಾಮಾಂತರ ಠಾಣೆಯ ಪೊಲೀಸರಿಗೆ ಡ್ರೋಣ್ ಅನ್ನು ಹಸ್ತಾಂತರಿಸಿದ್ದಾರೆ.
ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಜಿಲ್ಲಾ ಉಪಾಧ್ಯಕ್ಷ ವೀರಾಪುರ ಮುನಿನಂಜಪ್ಪ, ಶ್ರೀರಾಮ್, ಬಚ್ಚೇಗೌಡ, ಕೆಂಪಣ್ಣ ರಮೇಶ್, ಬೈರೇಗೌಡ, ಅಮರನಾರಾಯಣಸ್ವಾಮಿ ಇನ್ನಿತರೆ ರೈತರು ಹಾಜರಿದ್ದರು.