ಶಿಡ್ಲಘಟ್ಟ ನಗರದ ಶ್ರೀವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ರೈತ ಸಂಘದ ನಾನಾ ಬಣಗಳು, ಕನ್ನಡಪರ ಸಂಘಟನೆಗಳು ಸೇರಿ ಪ್ರತಿಭಟನೆಗೆ ಬೆಂಬಲಿಸುವ ನಾನಾ ಸಂಘಟನೆಗಳ ಮುಖಂಡರ ಪೂರ್ವಭಾವಿ ಸಭೆಯಲ್ಲಿ ರೈತ ಸಂಘದ ಶಿಡ್ಲಘಟ್ಟ ನಗರ ಘಟಕದ ಅಧ್ಯಕ್ಷ ಬಿ.ನಾರಾಯಣಸ್ವಾಮಿ ಮಾತನಾಡಿದರು.
ಕೇಂದ್ರ ಸರ್ಕಾರವು ಜಾರಿಗೆ ತಂದು ಎಪಿಎಂಸಿ ಹಾಗೂ ಕೃಷಿ ತಿದ್ದುಪಡಿ ಕಾಯಿದೆಗಳ ವಿರುದ್ದ ದೆಹಲಿಯಲ್ಲಿ ಒಂದು ವರ್ಷದಿಂದ ಹೋರಾಟ ನಡೆಯುತ್ತಿದ್ದು ವರ್ಷ ತುಂಬಿದ ಅಂಗವಾಗಿ ರೈತರಲ್ಲಿ ಜಾಗೃತಿ ಮೂಡಿಸಲು ಸಂಘಟಿಸಲು ನವೆಂಬರ್ 26 ರಂದು ನಾನಾ ರೈತ ಸಂಘಗಳ ನೇತೃತ್ವದಲ್ಲಿ ಚಿಕ್ಕಬಳ್ಳಾಪುರದ ಚದಲಪುರ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ತಿಳಿಸಿದರು.
ವರ್ಷದಿಂದಲೂ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಕರೆಸಿ ಮಾತುಕತೆ ನಡೆಸುವ ಸೌಜನ್ಯವನ್ನು ಇದುವರೆಗೂ ಮಾಡಿಲ್ಲ ಎಂದು ಕೇಂದ್ರ ಸರಕಾರದ ಧೋರಣೆಯನ್ನು ಖಂಡಿಸಿದರು.
ಹಾಗಾಗಿ ಪ್ರತಿಭಟನೆಗೆ ವರ್ಷವಾದ ಹಿನ್ನಲೆಯಲ್ಲಿ ಈ ಕುರಿತು ರೈತರಲ್ಲಿ ಅರಿವು ಮೂಡಿಸಲು ನವೆಂಬರ್ 26 ರಂದು ದೇಶದ ಉದ್ದಗಲಕ್ಕೂ ಪ್ರತಿಭಟನೆ ನಡೆಯಲಿದ್ದು ಜಿಲ್ಲೆಯ ಎಲ್ಲ ಸಂಘಟನೆಗಳ ರೈತರು ಚಿಕ್ಕಬಳ್ಳಾಪುರದ ಚದಲಪುರ ಕ್ರಾಸ್‌ನಲ್ಲಿ ಪ್ರತಿಭಟನೆ ನಡೆಸಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಬೇಕೆಂದು ಮನವಿ ಮಾಡಿದರು.ರೈತ ಸಂಘದ ನಾನಾ ಸಂಘಟನೆಗಳ ಮುಖಂಡರು, ಕನ್ನಡಪರ, ಪ್ರಗತಿಪರ, ದಲಿತಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.