ಶಿಡ್ಲಘಟ್ಟ ನಗರದ ರೈತ ಸಂಘದ ಕಚೇರಿಯಲ್ಲಿ ನಡೆದ ರೈತರ ಪೂರ್ವಭಾವಿ ಸಭೆಯಲ್ಲಿ ನವೆಂಬರ್ 26 ರಂದು ನಡೆಸುವ ಹೋರಾಟದ ರೂಪು ರೇಷೆಗಳ ಬಗ್ಗೆ ಚರ್ಚಿಸಿ ರೈತ ಸಂಘದ ರಾಜ್ಯ ಪ್ರಧಾನ ಕಾರ‍್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಮಾತನಾಡಿದರು.
ರೈತ ವಿರೋಧಿ ಧೋರಣೆ ತೋರುತ್ತಿರುವ ಕೇಂದ್ರದ ವಿರುದ್ಧ ದೇಶವ್ಯಾಪ್ತಿ ಸಂಯುಕ್ತ ಕಿಸಾನ್ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ಕೈಗೊಳ್ಳಲಾಗಿದೆ. ಕೃಷಿ ಹಾಗೂ ಎಪಿಎಂಸಿ ಕಾಯಿದೆಗಳ ತಿದ್ದುಪಡಿಯನ್ನು ವಿರೋಧಿಸಿ ದೆಹಲಿಯಲ್ಲಿ ಒಂದು ವರ್ಷದಿಂದ ಹೋರಾಟ ನಡೆಯುತ್ತಿದ್ದರೂ ಕೇಂದ್ರ ಸರ್ಕಾರ ಪ್ರತಿಭಟನಾ ರೈತರೊಂದಿಗೆ ಮಾತುಕತೆ ನಡೆಸುವ ಕನಿಷ್ಟ ಸೌಜನ್ಯವನ್ನು ತೋರದೆ ರೈತ ವಿರೋಧಿ ಧೋರಣೆ ಅನುಸರಿಸುತ್ತಿರುವುದರ ವಿರುದ್ದ ನವೆಂಬರ್ 26 ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಅವರು ತಿಳಿಸಿದರು.
ನವೆಂಬರ್ 26 ರಂದು ಚಿಕ್ಕಬಳ್ಳಾಪುರದ ಚದಲಪುರ ಕ್ರಾಸ್‌ನಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲಾಗುತ್ತಿದೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಹೋರಾಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪಾಲ್ಗೊಳ್ಳುವಂತೆ ಮಾಡಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಪ್ರತಿ ಹಳ್ಳಿಯಿಂದಲೂ ಸಂಘದ ಸದಸ್ಯ ರೈತರು ಭಾಗವಹಿಸುವಂತೆ ಮಾಡಲು ನಿರ್ಧರಿಸಲಾಯಿತು.
ರೈತ ಸಂಘದ ವೇಣುಗೋಪಾಲ್, ತಾದೂರು ಮಂಜುನಾಥ್, ವೀರಾಪುರ ಮುನಿನಂಜಪ್ಪ, ರಾಮಚಂದ್ರಪ್ಪ, ಬೀರಪ್ಪ ಹಾಜರಿದ್ದರು.