Sidlaghatta : ಶಿಡ್ಲಘಟ್ಟ ತಾಲ್ಲೂಕಿನ ರೈತಕೂಟಗಳ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಯುವಕ ರೈತ ಸಮಾಜದ 55 ಮಂದಿ ರೈತರು ಮತ್ತು ರೈತ ಮಹಿಳೆಯರು “ಅರಣ್ಯ ಕೃಷಿಯಲ್ಲಿ ರೈತರ ಪಾತ್ರ” ಕುರಿತಂತೆ ಮಲೆ ಮಹದೇಶ್ವರ ಬೆಟ್ಟದಲ್ಲಿ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು.
ಕೊಳ್ಳೆಗಾಲ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಂಗಸ್ವಾಮಿ ಮತ್ತು ಕೃಷಿ ಇಲಾಖೆಯ ನಿಶಾಂತ್ ರೈತರಿಗೆ ಅರಣ್ಯ ಕೃಷಿಯ ಅಗತ್ಯ ಮತ್ತು ಅನುಕೂಲತೆಗಳ ಬಗ್ಗೆ ವಿವರಿಸಿದರು.
“ರೈತರು ತಮಗಿರುವ ಜಮೀನಿನಲ್ಲಿ ಸ್ವಲ್ಪ ಭಾಗದಲ್ಲಿ ಅರಣ್ಯ ಕೃಷಿ ಮಾಡಿದರೆ, ಅದು ಬ್ಯಾಂಕಿನಲ್ಲಿ ಠೇವಣಿ ಇಟ್ಟರೀತಿ ಮುಂದೆ ಹೆಚ್ಚಿನ ಲಾಭಾಂಶ ಬರುತ್ತದೆ. ಹುಣಸೆ, ಮಹಾಗನಿ, ಬೇವು, ನೇರಳೆ ಸಿಲ್ವರ್ ಮುಂತಾದ ಸರ್ಕಾರ ಅರಣ್ಯ ಕೃಷಿಗಾಗಿ ಸಹಾಯಧನ ನೀಡುತ್ತಿದ್ದು, ಅದರ ಸದುಪಯೋಗ ಮಾಡಿಕೊಳ್ಳಬಹುದು. ಇದರಿಂದ ಒಳ್ಳೆಯ ಗಾಳಿ, ಮಳೆ, ಪರಿಸರ ಉಪಯೋಗಗಳೂ ಇವೆ ಮತ್ತು ಆರೋಗ್ಯಕ್ಕೂ ಒಳ್ಳೆಯದು ಎಂದು ಸಹಾಯಕ ನಿರ್ದೇಶಕ ರಂಗಸ್ವಾಮಿ ತಿಳಿಸಿದರು.
ಕರ್ನಾಟಕ ರಾಜ್ಯ ಯುವಕ ರೈತ ಸಮಾಜದ ಮಾಜಿ ಅಧ್ಯಕ್ಷ ಬಿ.ವಿ.ಮಂಜುನಾಥ್ ಮಾತನಾಡಿ, ರಕ್ತಚಂದನ, ಬೇವು, ಶ್ರೀಗಂಧ, ಸಿಲ್ವರ್, ನೇರಳೆ ಮುಂತಾದ ಬೆಳೆಗಳನ್ನು ಬೆಳೆಯುವಂತೆ ಸಲಹೆ ನೀಡಿದರು.
ಅಧ್ಯಯನ ಪ್ರವಾಸದಲ್ಲಿ ರೈತಕೂಟಗಳ ಒಕ್ಕೂಟದ ಅಧ್ಯಕ್ಷ ಹಿತ್ತಲಹಳ್ಳಿ ಗೋಪಾಲಗೌಡ, ಸಿರಿ ಸಮೃದ್ಧಿ ರೈತಕೂಟದ ಅಧ್ಯಕ್ಷ ಬೋದಗೂರು ವೆಂಕಟಸ್ವಾಮಿ ರೆಡ್ಡಿ, ರಾಮಚಂದ್ರಪ್ಪ, ರಾಮಮೂರ್ತಿ, ಜಗದೀಶ್, ರಾಮಾಂಜಿ, ಮಾಣಿಕ್ಯಮ್ಮ, ರಾಧಮ್ಮ, ಮಳ್ಳೂರು ವನಿತಾ, ಕಾಚಹಳ್ಳಿ ಶೈಲಜ, ಬೀರಪ್ಪನಹಳ್ಳಿ ಚಾತುರ್ಯ ಭಾಗಿಯಾಗಿದ್ದರು.