ಕೃಷಿಯಲ್ಲಿ ಬಳಕೆ ಮಾಡುವ ಯಂತ್ರೋಪಕರಣಗಳು ಹಾಗೂ ಹೊಸ ತಾಂತ್ರಿಕತೆಗಳ ಬಗ್ಗೆ ಹೆಚ್ಚಿನ ತಿಳಿವಳಿಕೆಗಾಗಿ ವಿವಿಧ ರೈತಕೂಟಗಳಿಂದ ರೈತ ಮಹಿಳೆಯರು ಮತ್ತು ರೈತರು ನಾಲ್ಕು ದಿನಗಳ ಅಧ್ಯಯನ ಪ್ರವಾಸಕ್ಕೆ ತೆರಳುತ್ತಿರುವುದಾಗಿ ರೈತ ಕೂಟಗಳ ಒಕ್ಕೂಟದ ಅಧ್ಯಕ್ಷ ಎಚ್.ಜಿ.ಗೋಪಾಲಗೌಡ ತಿಳಿಸಿದರು.
ಶಿಡ್ಲಘಟ್ಟ ನಗರದ ಬಸ್ ನಿಲ್ದಾಣದ ಬಳಿ ಗುರುವಾರ ರಾತ್ರಿ ವಿವಿಧ ರೈತಕೂಟಗಳ 50 ಮಂದಿ ರೈತರೊಂದಿಗೆ ಅಧ್ಯಯನ ಪ್ರವಾಸಕ್ಕೆ ಹೊರಟ ಅವರು ಮಾತನಾಡಿದರು.
ರೈತ ಕೂಟಗಳ ಒಕ್ಕೂಟ, ಬೋದಗೂರು ಸಿರಿ ಸಮೃದ್ಧಿ ರೈತಕೂಟ, ಕಾಚಹಳ್ಳಿ ಭಾರತಾಂಬೆ ಮಹಿಳಾ ರೈತರ ಕೂಟದ ಸದಸ್ಯರು ನಬಾರ್ಡ್ ಸಹಕಾರದಿಂದ ಕೃಷಿಯಲ್ಲಿ ಹೆಚ್ಚಿನ ತಿಳಿವಳಿಕೆ ಪಡೆಯಲು ಕೃಷಿ ವಿಜ್ಞಾನ ಕೇಂದ್ರಗಳು, ಪ್ರಗತಿಪರ ರೈತರ ತೋಟಗಳಿಗೆ ಭೇಟಿ ನೀಡಲಿದ್ದೇವೆ. ಸ್ವಸಹಾಯ ಸಂಘಗಳಲ್ಲಿ ಮಹಿಳೆಯರ ಪಾತ್ರ ಕುರಿತು ತಿಳಿಯಲು ಹಾಸನ, ಧರ್ಮಸ್ಥಳದ ರುಡ್ ಸೆಟ್ ಸಂಸ್ಥೆ ಮುಂತಾದೆಡೆ ಭೇಟಿ ನೀಡಲಿದ್ದೇವೆ. ಹಿತ್ತಲಹಳ್ಳಿ, ಬೆಳ್ಳೂಟಿ, ಬೋದಗೂರು, ಮಳ್ಳೂರು, ಕಾಚಹಳ್ಳಿ, ಶಿಡ್ಲಘಟ್ಟದ ರೈತ ಮಹಿಳೆಯರು ಮತ್ತು ರೈತರು ಪ್ರವಾಸ ಕೈಗೊಂಡಿದ್ದೇವೆ ಎಂದು ಹೇಳಿದರು.
ಬೋದಗೂರು ಸಿರಿ ಸಮೃದ್ಧಿ ರೈತಕೂಟದ ಅಧ್ಯಕ್ಷ ವೆಂಕಟಸ್ವಾಮಿರೆಡ್ಡಿ, ರಾಮಮೂರ್ತಿ, ಬಿ.ಎಂ.ಪ್ರಕಾಶ್, ಕಾಚಹಳ್ಳಿ ಭಾರತಾಂಬೆ ಮಹಿಳಾ ರೈತರ ಕೂಟದ ಅಧ್ಯಕ್ಷೆ ರತ್ನಮ್ಮ, ವನಿತಾ, ಶೈಲಜಾ, ಸಂಪಗಮ್ಮ, ಸರೋಜಮ್ಮ, ನಳಿನಾ, ರಾಮಚಂದ್ರಪ್ಪ, ವೆಂಕಟಪ್ಪ, ವೆಂಕಟೇಶಪ್ಪ ಹಾಜರಿದ್ದರು.