ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿರುವ ಸಮುದಾಯಭವನದಲ್ಲಿ ವಿಜಯಪುರದ ಡಾ.ಶ್ರೀ ಶಿವಕುಮಾರಮಹಾಸ್ವಾಮೀಜಿ ಸೇವಾಸಮಿತಿ, ಮೇಲೂರು ಮಾತೃಮಡಿಲು ದಿವ್ಯಾಂಗ ಸೇವಾಮಂದಿರ, ಜಿಲ್ಲಾ ನವಜೀವನ ಸೇವಾಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ದಿವ್ಯಾಂಗ ಮಕ್ಕಳ ಪೋಷಕರ ಶೈಕ್ಷಣಿಕ ಸಮಾಲೋಚನಾ ಸಭೆ, ಉಚಿತ ನೋಟ್‌ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಮೇಲೂರು ಗ್ರಾಮಪಂಚಾಯಿತಿ ಅಧ್ಯಕ್ಷ ಆರ್.ಎ.ಉಮೇಶ್ ಮಾತನಾಡಿದರು.
ವಿಶೇಷಚೇತನ ಮಕ್ಕಳು ಸಾಮಾನ್ಯ ಮಕ್ಕಳೊಂದಿಗೆ ಸಮಾನವಾಗಿ ಶೈಕ್ಷಣಿಕವಾಗಿ ಸಾಧಿಸಬೇಕು. ಗ್ರಾಮೀಣಭಾಗದ ಮಕ್ಕಳಲ್ಲಿ ಇಂಗ್ಲೀಷ್ ಜ್ಞಾನವನ್ನು ಬಲಪಡಿಸಿ ಆತ್ಮವಿಶ್ವಾಸವನ್ನು ಹೆಚ್ಚಿಸಬೇಕಿದೆ. ಆ ನಿಟ್ಟಿನಲ್ಲಿ ಇಂಗ್ಲೀಷ್ ಕೌಶಲಾಭಿವೃದ್ಧಿ ಆನ್‌ಲೈನ್ ಕ್ಲಾಸ್ ನಡೆಸುತ್ತಿರುವುದು ಅಭಿನಂದನೀಯ. ಬಡವರು, ನೊಂದವರ ಮಕ್ಕಳ ಮತ್ತು ದಿವ್ಯಾಂಗ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕಾದ ಅಗತ್ಯವಿದೆ. ಸರ್ಕಾರದ ಸವಲತ್ತುಗಳ ಜೊತೆಗೆ ಸ್ವಯಂಸೇವಾ ಸಂಘಸಂಸ್ಥೆಗಳು ವಿಶೇಷಚೇತನರ ಶೈಕ್ಷಣಿಕಾಭಿವೃದ್ಧಿಗೆ ಸಹಕಾರ ನೀಡಬೇಕಿದೆ ಎಂದರು.
ಶಿಕ್ಷಣತಜ್ಞ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಶರಣಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಪೋಷಕರು ಮಕ್ಕಳಿಗೆ ಆಸ್ತಿ ಸಂಪಾದಿಸಿ ಇಡುವುದಕ್ಕಿಂತ ಉತ್ತಮ ಶಿಕ್ಷಣ ಕೊಡಿಸಿ ಮಕ್ಕಳನ್ನೇ ಸಮಾಜದ ಆಸ್ತಿಯನ್ನಾಗಿಸುವತ್ತ ಹೆಚ್ಚು ಒಲವು ಹೊಂದಬೇಕು. ವಿಶೇಷಚೇತನ ಮಕ್ಕಳಲ್ಲಿ ಅಡಗಿರುವ ಸುಪ್ತ ಕೌಶಲಗಳನ್ನು ಹೊರಹಾಕಿ ಉತ್ತಮ ಜ್ಞಾನ ಪಡೆಯಲು ಬೇಕಾದ ಅವಕಾಶಗಳನ್ನು ಮಾತೃಮಡಿಲು ಒದಗಿಸಲಿದೆ. ಶಿವಕುಮಾರಮಹಾಸ್ವಾಮೀಜಿ ಸೇವಾಸಮಿತಿಯ ವತಿಯಿಂದ ಅಗತ್ಯವಿರುವವರಿಗೆ ಪುನರ್ವಸತಿ ಕಲ್ಪಿಸುವ, ದಿವ್ಯಾಂಗಮಕ್ಕಳಿಗೆ ಇಂಗ್ಲೀಷ್ ಜ್ಞಾನ ತರಬೇತಿ, ವರ್ತನಾತೆರಪಿ ನೀಡುವ ಯೋಜನೆಗಳನ್ನು ಅನುಷ್ಟಾನಗೊಳಿಸಲಾಗಿದೆ ಎಂದರು.
ಜಿಲ್ಲಾ ನವಜೀವನ ಸೇವಾಸಂಸ್ಥೆಯ ಅಧ್ಯಕ್ಷ ಬೆಳ್ಳೂಟಿ ಮುನಿರಾಜು ಮಾತನಾಡಿ, ದಿವ್ಯಾಂಗರಿಗೆ ಅನುಕಂಪಕ್ಕಿಂತ ಅವಕಾಶಗಳು ಸಿಗಬೇಕಿದೆ. ದಿವ್ಯಾಂಗರ ಸರ್ವತೋಮುಖ ಪ್ರಗತಿಗೆ ಪೂರಕವಾದ ಯೋಜನೆಗಳು ಕೈಗೆತ್ತಿಕೊಳ್ಳುವುದರ ಜೊತೆಗೆ ಉಚಿತ ಹೆಲ್ತ್ ಕ್ಯಾಂಪ್‌ಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಮಾತೃಮಡಿಲು ದಿವ್ಯಾಂಗ ಸೇವಾಮಂದಿರದ ಮ್ಯಾನೇಜಿಂಗ್ ಟ್ರಸ್ಟಿ ಬಿ.ಎಂ.ಜಗದೀಶ್‌ಕುಮಾರ್, ಟ್ರಸ್ಟಿ ಜಂಗಮಕೋಟೆ ಮಂಜುನಾಥ್, ಸುವರ್ಣಶಿವಕುಮಾರ್, ಇಂಗ್ಲೀಷ್ ತರಬೇತುದಾರ ಶಿಕ್ಷಕ ರಾಘವೇಂದ್ರ ಮಾತನಾಡಿದರು.
ಶಿಡ್ಲಘಟ್ಟ, ಚೀಮಂಗಲ, ಮಳಮಾಚನಹಳ್ಳಿ ಸಂತೆಕಲ್ಲಹಳ್ಳಿ, ಬೀಚಗೊಂಡನಹಳ್ಳಿಯ ದಿವ್ಯಾಂಗಮಕ್ಕಳ ಪೋಷಕರು ಮಕ್ಕಳ ಶೈಕ್ಷಣಿಕ ಪ್ರಗತಿಯ ಕುರಿತು ಮಾತನಾಡಿದರು. ಇಂಗ್ಲೀಷ್ ತರಬೇತಿ, ಬಿಹೇವಿಯರ್ ಥೆರಪಿಯಲ್ಲಿ ಪಡೆದುಕೊಂಡಿರುವ ಫಲಾನುಭವಿ ವಿದ್ಯಾರ್ಥಿಗಳ ಸಾಧನೆ ಒರೆಗಚ್ಚಲಾಯಿತು. ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಪುಸ್ತಕಗಳನ್ನು ವಿತರಿಸಲಾಯಿತು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi