Sidlaghatta : ಶಿಡ್ಲಘಟ್ಟ ತಾಲ್ಲೂಕಿನ ದ್ಯಾವಪ್ಪನಗುಡಿ ಗ್ರಾಮದ ದ್ಯಾವಪ್ಪ ತಾತನ ದೇವಾಲಯದಲ್ಲಿ ಕಾಯಿ ಉಟ್ಲು ಮತ್ತು ಹಾಲು ಉಟ್ಲು ಉತ್ಸವ, ಪರಿಷೆ ಮತ್ತು ಪೂಜಾ ಮಹೋತ್ಸವದೊಂದಿಗೆ ಸಾಮೂಹಿಕ ಅನ್ನ ಸಂತರ್ಪಣೆ ನಡೆಯಿತು.
ದ್ಯಾವಪ್ಪ ತಾತನ ಮೂರ್ತಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ಪೂಜಿಸಿ ಮಹಾ ಮಂಗಳಾರತಿ ಮಾಡಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ಭಕ್ತರು ತುಪ್ಪದ ದೀಪಗಳನ್ನು ಬೆಳಗಿದರು. ಮಣ್ಣಿನ ಕುಡಿಕೆಗಳಲ್ಲಿ ಹಾಲನ್ನು ಅರ್ಪಿಸಿದರು. ಪೂಜಿಸಿದ ಉಪ್ಪು ಕರಿದಾರವನ್ನು ಮನೆಗೆ ಕೊಂಡೊಯ್ದರು.
ಭಕ್ತರಿಂದ ಸೇವಾ ರೂಪದಲ್ಲಿ ಬಂದ ತರಕಾರಿ ಕಾಳು, ಬೇಳೆ, ಅಕ್ಕಿ ರಾಗಿ ಬಳಸಿ ಬಿಸಿ ಬಿಸಿ ಮುದ್ದೆ ಕಾಳು ಸಾರನ್ನು ಮಾಡಿ ಸಾವಿರಾರು ಮಂದಿ ಭಕ್ತರಿಗೆ ಉಣ ಬಡಿಸಲಾಯಿತು.
ದಶಕಗಳಿಂದಲೂ ಸಂಪ್ರದಾಯ ಬದ್ಧವಾಗಿ ನಡೆದುಕೊಂಡು ಬಂದಂತೆ ಹಾಲನ್ನು ತುಂಬಿ ಹರಕೆ ತೀರಿಸುವ ನಾಣ್ಯ ಹಾಕಿದ ಮಣ್ಣಿನ ಚಿಕ್ಕ ಕುಡಿಕೆಗಳನ್ನು ಗುಡಿ ಮುಂದೆ ಸಾಲಾಗಿ ಕಟ್ಟಿ ಅದನ್ನು ಶಾಸ್ತ್ರೋಕ್ತವಾಗಿ ಒಡೆದು ಹಾಕಲಾಗುತ್ತದೆ. ಕುಡಿಕೆಗಳಲ್ಲಿನ ನಾಣ್ಯಗಳನ್ನು ಅಲ್ಲಿನ ಭಕ್ತರು ಮುಗಿಬಿದ್ದು ತೆಗೆದುಕೊಂಡು ಮನೆಗೆ ಕೊಂಡೊಯ್ಯುತ್ತಾರೆ. ನಾಣ್ಯ ಸಿಕ್ಕರೆ ಒಳ್ಳೆಯದಾಗುತ್ತದೆ ಎನ್ನುವುದು ಭಕ್ತರ ನಂಬಿಕೆ.
ಹಾಲು ಉಟ್ಲು ಉತ್ಸವದ ನಂತರ ಕಾಯಿ ಉಟ್ಲು ಉತ್ಸವವನ್ನು ನಡೆಸಲಾಯಿತು. ಗುಡಿಯ ಮುಂದೆ ಕಲ್ಲಿನ ಕಂಬಕ್ಕೆ ತೆಂಗಿನ ಕಾಯಿಗಳನ್ನು ಕಟ್ಟಿ ಅವುಗಳನ್ನು ತಿರುಗಿಸುತ್ತಿರುವಾಗ ಕೆಳಗೆ ನಿಂತ ವೀರರು ಬಾರುದ್ದದ ಕೋಲಿನಿಂದ ತೆಂಗಿನ ಕಾಯಿಯನ್ನು ಒಡೆಯುವ ದೃಶ್ಯಕ್ಕೆ ಸಾವಿರಾರು ಮಂದಿ ಸಾಕ್ಷಿಯಾಗಿದ್ದರು.
ಕಾಯಿ ಮತ್ತು ಕ್ಷೀರ ಉಟ್ಲು ಉತ್ಸವ ಅಂಗವಾಗಿ ಪರಿಷೆ ನಡೆಯಿತು. ಬರಗು ಬತಾಸು ಆಟಿಕೆಗಳ ಹತ್ತಾರು ಅಂಗಡಿಗಳು ತಲೆ ಎತ್ತಿದ್ದವು. ಮಾರಾಟ ಮತ್ತು ಖರೀದಿಸುವುದಕ್ಕಾಗಿ ಪರಿಷೆಗಾಗಿ ಸಾಕಷ್ಟು ಸಂಖ್ಯೆಯಲ್ಲಿ ಎತ್ತುಗಳನ್ನು ತರಲಾಗಿತ್ತು.