Sidlaghatta : ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಶಾಖೆ ವತಿಯಿಂದ ದಲಿತರ ಮೂಲಭೂತ ಹಕ್ಕುಗಳ ಈಡೇರಿಕೆಗಾಗಿ ಒತ್ತಾಯಿಸಿ ಸೋಮವಾರ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಶಿಡ್ಲಘಟ್ಟ ನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನವನ್ನು ಹತ್ತು ಕೋಟಿ ರೂ ವೆಚ್ಚದಲ್ಲಿ ಶೀಘ್ರವಾಗಿ ನಿರ್ಮಿಸಬೇಕು. ಬಗರ್ ಹುಕುಮ್ ಸಮಿತಿಯನ್ನು ರಚಿಸಿ ತಾಲ್ಲೂಕಿನಾದ್ಯಂತ ನಮೂನೆ – 50, 53, 57 ರಲ್ಲಿ ಬಾಕಿ ಇರುವ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಬೇಕು. ತಾಲ್ಲೂಕಿನಾದ್ಯಂತ ರೈತರಿಗೆ ಅರಣ್ಯ ಇಲಾಖೆಯಿಂದ ನಡೆಯುತ್ತಿರುವ ಕಿರುಕುಳವನ್ನು ತಡೆಗಟ್ಟಿ ರೈತರನ್ನು ವಕ್ಕಲೆಬ್ಬಿಸುವುದನ್ನು ನಿಲ್ಲಿಸಬೇಕು. ನಿವೇಶನ ರಹಿತ ಫಲಾನುಭವಿಗಳನ್ನು ಗುರುತಿಸಿ ಸರ್ಕಾರಿ ಜಮೀನಿನಲ್ಲಿ ನಿವೇಶನಗಳನ್ನು ನಿರ್ಮಿಸಿ ಹಂಚಿಕೆ ಮಾಡಿ ಹಕ್ಕು ಪತ್ರ ನೀಡಬೇಕು. ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಇರುವ ಅವ್ಯವಸ್ಥೆಗಳನ್ನು ಸರಿಪಡಿಸಬೇಕು.
ಸಾದಲಿ ಮುಖ್ಯರಸ್ತೆಯ ಒತ್ತುವರಿಯನ್ನು ತೆರವುಗೊಳಿಸಿ ರಸ್ತೆ ಅಗಲೀಕರಣ ಮಾಡಬೇಕು. ತಾಲ್ಲೂಕಿನಾದ್ಯಂತ ದಲಿತರಿಗೆ ಸ್ಮಶಾನಗಳನ್ನು ಮಂಜೂರು ಮಾಡಬೇಕು ಮತ್ತು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ ಇಲಾಖೆಗಳಲ್ಲಿ ದಲಿತರಿಗೆ ಸಿಗಬೇಕಾದ ಸೌಲಭ್ಯಗಳು ಸಮರ್ಪಕವಾಗಿ ಸಿಗುತ್ತಿಲ್ಲ. ಈ ಬಗ್ಗೆ ಕ್ರಮ ಜರುಗಿಸಬೇಕು ಮುಂತಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟಿಸಿ, ತಹಶಿಲ್ದಾರ್ ಬಿ.ಎನ್.ಸ್ವಾಮಿ ಅವರಿಗೆ ಮನವಿಯನ್ನು ಸಲ್ಲಿಸಿದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಎನ್.ವೆಂಕಟೇಶ್, ಕೆ.ಸಿ.ರಾಜಾಕಾಂತ್, ಜಿಲ್ಲಾ ಸಂಚಾಲಕ ಸಿ.ಜಿ.ಗಂಗಪ್ಪ, ಸಂಘಟನಾ ಸಂಚಾಲಕರಾದ ಬಿ.ವಿ.ವೆಂಕಟರಮಣ, ಎನ್.ಎ.ವೆಂಕಟೇಶ್, ಆನಂದ್, ನರಸಿಂಹಮೂರ್ತಿ, ಎಂ.ದೇವರಾಜ್, ತಾಲ್ಲೂಕು ಸಂಚಾಲಕ ಟಿ.ಎ.ಚಲಪತಿ, ಸಂಘಟನಾ ಸಂಚಾಲಕರಾದ ಹುಜಗೂರು ವೆಂಕಟೇಶ್, ಗಂಗಾಧರ್, ಲಕ್ಕೇನಹಳ್ಳಿ ವೆಂಕಟೇಶ್, ದೊಡ್ಡತಿರುಮಳಯ್ಯ, ಸಿ.ಎಂ.ಮುನಿಕೃಷ್ಣಪ್ಪ, ಪರಮೇಶ್, ಶಶಿಕಲಾ, ರಾಜು, ವೆಂಕಟೇಶ್, ಮುನಿಕದಿರಪ್ಪ ಹಾಜರಿದ್ದರು.