ಶಿಡ್ಲಘಟ್ಟ ನಗರದಲ್ಲಿ ಫೆಬ್ರುವರಿ 10 ರಂದು ನಡೆದಿದ್ದ ವೃದ್ಧ ದಂಪತಿ ಕೊಲೆ ಪ್ರಕರಣ ಭೇದಿಸಿದ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಫೈಜ್ (20) ಮತ್ತು ಇಬ್ಬರು ಅಪ್ರಾಪ್ತರು ಬಂಧಿತ ಆರೋಪಿಗಳು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಶಿಡ್ಲಘಟ್ಟ ನಗರದ ವಾಸವಿ ಕಲ್ಯಾಣ ಮಂಟಪದ ಹಿಂದೆ ಇದ್ದ ಮನೆಯಲ್ಲಿ ವಾಸವಿದ್ದ ಬಟ್ಟೆಯ ವ್ಯಾಪಾರಿ ಶ್ರೀನಿವಾಸ್ ಅಲಿಯಾಸ್ ದೊಂತಿ ಸೀನಪ್ಪ(76), ಆತನ ಪತ್ನಿ ಪದ್ಮಾವತಿ(67) ರನ್ನು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಶಿಡ್ಲಘಟ್ಟ ನಗರ ಪೊಲೀಸರು ಸೇರಿದಂತೆ ವಿಶೇಷ ತನಿಖಾದಳ ಬಂಧಿಸಿದ್ದಾರೆ ಎಂದರು.
ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕಾಗಿ ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಲಾಗಿತ್ತು. ಅದರಲ್ಲಿ ಪ್ರಮುಖವಾಗಿ ಪೇದೆಗಳಾದ ಶ್ರೀಹರಿ, ಹರೀಶ್ ಅವರ ವಿಶೇಷ ಶ್ರಮದಿಂದ ಆರೋಪಿಗಳನ್ನು ಬಂಧಿಸಲಾಗಿದ್ದು ತಂಡಕ್ಕೆ ಬಹುಮಾನವನ್ನು ನೀಡುವುದಾಗಿ ಜಿಲ್ಲಾ ಎಸ್ಪಿ ಜಿಕೆ ಮಿಥುನ್ ಕುಮಾರ್ ತಿಳಿಸಿದರು.
ಬಂಧಿತ ಆರೋಪಿಗಳು ಈ ಹಿಂದೆ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ದ್ವಿಚಕ್ರ ವಾಹನ, ಕುರಿಗಳ ಕಳ್ಳತನದಲ್ಲಿ ಭಾಗಿಯಾಗಿದ್ದು ಜಿಲ್ಲೆಯ ಕೆಂಚಾರ್ಲಹಳ್ಳಿ ಹಾಗೂ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇವರ ವಿರುದ್ಧ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಿ.ವೈ.ಎಸ್.ಪಿ ಚಂದ್ರಶೇಖರ್, ಸರ್ಕಲ್ ಇನ್ಸ್ ಪೆಕ್ಟರ್ ಧರ್ಮೇಗೌಡ, ಸಬ್ ಇನ್ಸ್ ಪೆಕ್ಟರ್ ಸತೀಶ್ ಹಾಜರಿದ್ದರು.