ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮದಲ್ಲಿ ರಸ್ತೆಗಳನ್ನು ಅಬಿವೃದ್ಧಿ ಮಾಡಲು ಕಾಮಗಾರಿಗೆ ಚಾಲನೆ ನೀಡುತ್ತಿದ್ದು, ತಾಲ್ಲೂಕಿನ ಗ್ರಾಮದಲ್ಲಿ ಬಾಕಿ ಇರುವ ರಸ್ತೆ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಲಾಗುವುದು ಎಂದು ಶಾಸಕ ವಿ.ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ದಿಬ್ಬೂರ ಹಳ್ಳಿಯಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಕರ್ನಾಟಕ ಸರ್ಕಾರದ ಬಜೆಟ್‍ನಲ್ಲಿ ಓ.ಆರ್.ಎಫ್ ಯೋಜನೆಯಡಿಯಲ್ಲಿ ದಿಬ್ಬೂರ ಹಳ್ಳಿಯಿಂದ ಶಿಡ್ಲಘಟ್ಟಕ್ಕೆ ಹೋಗುವ 7 ಕಿ.ಮಿ ರಸ್ತೆಯನ್ನು ಸರಿಪಡಿಸಲು ಸುಮಾರು 6 ಕೋಟಿ 90 ಲಕ್ಷ ರೂ ಮಂಜೂರಾಗಿದ್ದು, ಟೆಂಡರ್ ಕರೆಯಲಾಗಿದೆ. ಅದಕ್ಕಾಗಿ ಗುದ್ದಲಿ ಪೂಜೆ ನೆರವೇರಿಸುತ್ತಿದ್ದು, ಇನ್ನು ಬಾಕಿ ಉಳಿದ ರಸ್ತೆ ಕಾಮಗಾರಿಗಳನ್ನು ಸಹ ಶೀಘ್ರವೇ ಸರಿಪಡಿಸುವುದಾಗಿ ತಿಳಿಸಿದರು.
ದೇಶದಲ್ಲಿ ಸುಮಾರು 3 ವರ್ಷಗಳಿಂದ ಕೊರೊನಾದಿಂದ ಅಭಿವೃದ್ಧಿ ಕುಂಠಿತವಾಗಿದ್ದು, ರಾಜ್ಯದಲ್ಲಿ ಅಬಿವೃದ್ಧಿ ಕಾಮಗಾರಿಗಳಿಗೆ ಹಣ ಬಿಡುಗಡೆಯಾಗದೆ ರಸ್ತೆ, ಸೇರಿದಂತೆ ಹಲವು ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ. ಇನ್ನು ಮುಂದೆ ಸರ್ಕಾರದಿಂದ ಬರುವ ಅನುದಾನವನ್ನು ಉಪಯೋಗಿಸಿಕೊಂಡು, ಉಳಿದ ಕಾಮಗಾರಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ ಅವರು, ಸರ್ಕಾರದಿಂದ ಇನ್ನೂ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಇಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಗುತ್ತಿಗೆದಾರ ಬಿ.ಎನ್.ದೇವರಾಜ್, ಮುಖಂಡರಾದ ಡಿ.ಎಸ್.ಎನ್ ರಾಜು, ಸುಬ್ಬರಾಯಪ್ಪ, ವೇಣುಗೋಪಾಲ್, ಗೊರ್ಲಪ್ಪ, ನರಸಿಂಹಪ್ಪ, ಗಿರೀಶ್, ಗ್ರಾಮಸ್ಥರು ಹಾಜರಿದ್ದರು.