Melur, Sidlaghatta : ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ದ್ವೇಷರಾಜಕಾರಣ ಮಾಡುವುದಿಲ್ಲ. ಮುಂದಿನ 5 ವರ್ಷದ ಶಾಸಕರ ಅವಧಿಯಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿ, ಎಲ್ಲಾ ವರ್ಗದವರ ಸಂತಸಯುತ ಜೀವನಕ್ಕೆ ಅನುವು ಮಾಡಿಕೊಡುವುದೇ ತಮ್ಮ ಪ್ರಮುಖ ಗುರಿ ಎಂದು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ತಾಲ್ಲೂಕಿನ ಮೇಲೂರು ಗ್ರಾಮದ ಅವರ ಗೃಹಕಚೇರಿಯಲ್ಲಿ ಸರ್ಕಾರಿ ನೌಕರರ ಸಂಘ, ಪ್ರೌಢಶಾಲಾ ಸಹಶಿಕ್ಷಕರ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಮತ್ತಿತರ ವೃಂದ ಸಂಘಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕ್ಷೇತ್ರದ ಅಭಿವೃದ್ಧಿಯಲ್ಲಿ ನೌಕರರ ಪಾತ್ರ ಮಹತ್ವದ್ದು, ಸರ್ಕಾರದ ಯೋಜನೆಗಳನ್ನು ಅರ್ಹರಿಗೆ ಪ್ರಾಮಾಣಿಕವಾಗಿ ತಲುಪಿಸುವಲ್ಲಿ ನೌಕರರು ಯಾಶಸ್ವಿಯಾಗಿ ಕಾರ್ಯನಿರ್ವಹಿಸಬೇಕು. ಕ್ಷೇತ್ರದಲ್ಲಿನ ಕೊರತೆಗಳನ್ನು ಆದ್ಯತೆಯ ಆಧಾರದ ಮೇಲೆ ಪರಿಗಣಿಸಿ ಪರಿಹರಿಸಲು ತಕ್ಷಣದಿಂದಲೇ ಕ್ರಮಕೈಗೊಳ್ಳಲಾಗುವುದು. ನೌಕರರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಲಾಗುವುದು ಎಂದರು.
ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ ಮಾತನಾಡಿ, ಕ್ಷೇತ್ರದಲ್ಲಿ ತಾಲ್ಲೂಕು ಕಚೇರಿ, ಉಪನೊಂದಣಾಧಿಕಾರಿ ಕಚೇರಿ, ಶಿಕ್ಷಣ ಇಲಾಖೆ ಸೇರಿದಂತೆ ಎಲ್ಲಾ ವೃಂದಗಳಲ್ಲಿಯೂ ಸಾಕಷ್ಟು ಖಾಲಿ ಹುದ್ದೆಗಳಿದ್ದು ಕೂಡಲೇ ತುಂಬಲು ಕ್ರಮಕೈಗೊಳ್ಳಬೇಕು. ಸರ್ಕಾರಿ ನೌಕರರ ಭವನ, ಗುರುಭವನ ನಿರ್ಮಾಣಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಬೇಕು. ಸಕಾರಿ ನೌಕರರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.
ನೂತನವಾಗಿ ಶಾಸಕರಾಗಿ ಆಯ್ಕೆಯಾದ ಬಿ.ಎನ್.ರವಿಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಲ್.ವಿ.ವೆಂಕಟರೆಡ್ಡಿ, ಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ, ಪ್ರೌಢಸಾಲಾ ಮುಖ್ಯಶಿಕ್ಷಕರ ಸಂಘದ ಉಪಾಧ್ಯಕ್ಷ ಬೈರಾರೆಡ್ಡಿ, ಸರ್ಕಾರಿ ನೌಕರರ ಸಂಘದ ಅಕ್ಕಲರೆಡ್ಡಿ, ಮಧುಸೂಧನ್, ಮಾಜಿ ಅಧ್ಯಕ್ಷ ಗುರುರಾಜು, ನಗರಸಭಾ ಪೌರಾಯುಕ್ತ ಶ್ರೀಕಾಂತ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಂ.ಮುನಿರಾಜು, ಇಸಿಒ ಭಾಸ್ಕರಗೌಡ, ಕಂದಾಯ ಇಲಾಖೆ, ಕೃಷಿ ಇಲಾಖೆ ಸೇರಿದಂತೆ ವಿವಿಧ ವೃಂದಸಂಘಗಳ ಪದಾಧಿಕಾರಿಗಳು ಹಾಜರಿದ್ದರು.