Devaramallur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಪ್ರತಿವರ್ಷ ಶ್ರಾವಣ ಮಾಸದ ಪ್ರತಿ ಶನಿವಾರದಂದು ಮೊದಲನೇ ವಾರದಿಂದ ನಾಲ್ಕನೇ ಶನಿವಾರದ ತನಕ ರಾಮ ಭಜನೆ ತಂಡದವರು ಗ್ರಾಮದ ಪ್ರತಿ ಮನೆಯಲ್ಲಿ ಭಿಕ್ಷಾಟನೆ ಮಾಡುವರು.
ಹಿಂದಿನ ಕಾಲದಿಂದ ಹಿರಿಯರು ನಡೆಸಿಕೊಂಡು ಬಂದ ಹಾದಿಯಲ್ಲಿ ಈಗಿನ ಯುವಕರ ತಂಡವು ಸಹ ಈ ಆಚರಣೆಯನ್ನು ಮುಂದುವರೆಸಿದ್ದು, ಗ್ರಾಮದ ಪ್ರತಿ ಮನೆಗೆ ಹೊರಟಾಗ ಶ್ರೀರಾಮನ ಭಾವಚಿತ್ರಕ್ಕೆ ಮತ್ತು ದೀಪ ಸ್ತಂಭಕ್ಕೆ ಹೆಣ್ಣುಮಕ್ಕಳು ಪೂಜೆ ಸಲ್ಲಿಸುವರು.
ಪೂಜೆ ಸಲ್ಲಿಸಿದ ನಂತರ ಹೆಣ್ಣುಮಕ್ಕಳು ಅಕ್ಷಯ ಪಾತ್ರೆಗೆ ರಾಗಿಹಿಟ್ಟು, ಅಕ್ಕಿ, ಬೆಳೆಗಳು ಸೇರಿದಂತೆ ಹಣವನ್ನು ಸಹ ನೀಡುವರು.
ಗ್ರಾಮದ ಮನೆಮನೆಯಲ್ಲಿ ನೀಡಿದ ದವಸ ಧಾನ್ಯಗಳನ್ನು ಶ್ರೀ ಕೋದಂಡರಾಮಸ್ವಾಮಿ ದೇವಾಲಯದಲ್ಲಿ ಸಂಗ್ರಹಿಸಿ, ಶ್ರಾವಣ ಮಾಸದ ಶನಿವಾರಗಳು ನಾಲ್ಕು ವಾರಗಳು ತುಂಬಿದ ಮೇಲೆ ಸಂಗ್ರಹಿಸಿರುವ ದವಸ ಧಾನ್ಯಗಳನ್ನು, ದೇವಾಲಯದಲ್ಲಿ ಸಾರ್ವಜನಿಕರ ಮುಂದೆ ಹರಾಜು ಮಾಡಿ ಬಂದ ಹಣವನ್ನು ದೇವಾಲಯದ ಹುಂಡಿಗೆ ಸಲ್ಲಿಸಲಾಗುತ್ತದೆ.
ಈ ಸಂದರ್ಭದಲ್ಲಿ ರಾಮ ಭಜನೆ ತಂಡದ ಮಂಜುನಾಥ್ ಮಾತನಾಡಿ. ನಮ್ಮ ಹಿರಿಯರು ನಡೆಸಿಕೊಂಡ ಬಂದ ಹಾದಿಯಲ್ಲಿ ನಾವು ಸಹ ಶ್ರಾವಣ ಶನಿವಾರಗಳಲ್ಲಿ ಗ್ರಾಮದ ಪ್ರತಿ ಮನೆಗೂ ತೆರಳಿ ರಾಮನ ಭಜನೆ ಮಾಡುತ್ತಾ ಭಿಕ್ಷಾಟನೆ ಮಾಡುತ್ತೇವೆ. ಗ್ರಾಮಕ್ಕೆ ಒಳ್ಳೆಯದಾಗುವುದರ ಜೊತೆಗೆ ಲೋಕ ಕಲ್ಯಾಣಾರ್ಥಕವಾಗಿ ನಮ್ಮ ಯುವಕರ ತಂಡದ ಶ್ರೀರಾಮ್, ಅನುರಾಗ, ಮುನಿರಾಜು, ಹಾಗೂ ಇತರ ಗ್ರಾಮದ ಯುವಕರು, ಶ್ರೀರಾಮನ ಸೇವೆಯಲ್ಲಿ ತೊಡಗಿದ್ದೇವೆ ಎಂದು ಹೇಳಿದರು.