Devaramallur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಗುರುವಾರ ಶ್ರೀ ಮಳ್ಳೂರಾಂಭ ದೇವಿಯ ದನಗಳ ಜಾತ್ರೆಯ ಅಂಗವಾಗಿ ಉತ್ತಮ ರಾಸುಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಜರುಗಿತು.
ಜಿಲ್ಲಾ ಸಹಕಾರ ಹಾಲು ಒಕ್ಕೂಟ, ಪಶುವೈದ್ಯಕೀಯ ಇಲಾಖೆ ಹಾಗೂ ದೇವರಮಳ್ಳೂರು ಹಾಲು ಉತ್ಪಾದಕರ ಸಹಕಾರ ಸಂಘದ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೆಎಂಎಫ್ ನಿರ್ದೇಶಕ ಆರ್.ಶ್ರೀನಿವಾಸ್ ಭಾಗವಹಿಸಿ ಮಾತನಾಡಿದರು. “ಕೋಲಾರಕ್ಕೆ ಹೋಲಿಸಿದರೆ ಚಿಕ್ಕಬಳ್ಳಾಪುರದಲ್ಲಿ ಹಾಲಿನ ಉತ್ಪಾದನೆ ಕಡಿಮೆ. ಹೀಗಾಗಿ ಸರ್ಕಾರ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಹಾಲಿನ ದರವನ್ನು ಹೆಚ್ಚಿಸಲು ಕ್ರಮ ತೆಗೆದುಕೊಳ್ಳಬೇಕು,” ಎಂದು ಅವರು ಹೇಳಿದರು.
ಅವರು ಮುಂದಾಗಿ, “ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟವನ್ನು ಬೇರ್ಪಡಿಸಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟವನ್ನು ರಚಿಸಲಾಗಿದೆ. ಈಗ ಹಾಲು ಉತ್ಪಾದಕರಿಂದ ಗುಣಮಟ್ಟದ ಹಾಲು ಉತ್ಪಾದನೆಗೆ ಹೆಚ್ಚಿನ ಪ್ರಯತ್ನ ನಡೆಯಬೇಕು. ಜೊತೆಗೆ ಉತ್ತಮ ರಾಸುಗಳನ್ನು ಉಳಿಸಿಕೊಂಡು ಹಾಲಿನ ಉತ್ಪಾದನೆ ಹೆಚ್ಚಿಸಲು ಚಿಂತನ ಮಾಡಬೇಕು,” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಂದು ಉತ್ತಮ ಮಿಶ್ರ ತಳಿಯ ಎತ್ತು, ಹಸು, ಎಮ್ಮೆ, ಪಡ್ಡೆಗಳಿಗೆ ಪ್ರಥಮ ಬಹುಮಾನವನ್ನು ನೀಡಲಾಯಿತು. ಜೊತೆಗೆ ಭಾಗವಹಿಸಿದ ಎಲ್ಲಾ ರಾಸುಗಳಿಗೆ ಸಮಾನಾದರದ ಬಹುಮಾನಗಳನ್ನು ವಿತರಿಸಲಾಯಿತು.
ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ಗೌಡ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ರಾಮಚಂದ್ರ, ಕೋಚಿಮುಲ್ ಮಾಜಿ ನಿರ್ದೇಶಕ ಬಂಕ್ ಮುನಿಯಪ್ಪ, ಚಿಮುಲ್ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಡಾ. ರವಿಕಿರಣ, ವಿಸ್ತರಣಾಧಿಕಾರಿಗಳಾದ ಜಯಚಂದ್ರ, ಉಮೇಶ್ ರೆಡ್ಡಿ, ಶ್ರೀನಿವಾಸ್, ಮೋಹನ್, ಗೋಪಾಲ್, ಶಂಕರ್, ವೇಣು, ಹಾಪ್‌ಕಾಮ್ಸ್ ಮಾಜಿ ಅಧ್ಯಕ್ಷ ಹುಜಗೂರು ರಾಮಯ್ಯ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ದೇವರಾಜ್, ಉಪಾಧ್ಯಕ್ಷ ಎಂ. ಕೇಶವರೆಡ್ಡಿ, ಡೇರಿಯ ಮುಖ್ಯ ಕಾರ್ಯ ನಿರ್ವಾಹಕ ಪಿ. ಮಂಜುನಾಥ್, ಗ್ರಾಮ ಪಂಚಾಯತಿ ಸದಸ್ಯ ಎನ್. ವೆಂಕಟೇಶ್, ಕೆಂಪೇಗೌಡ, ಮುನಿಶಾಮಪ್ಪ ಹಾಗೂ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.