Devaramallur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿನ ಮಳ್ಳೂರಮ್ಮನ ಕೆರೆಯ ಒಂದು ಸಣ್ಣ ಕುಂಟೆಗೆ ಗ್ರಾಮ ಪಂಚಾಯಿತಿಯವರು ಕೊಳವೆ ಬಾವಿಗಳಿಂದ ನೀರನ್ನು ಹರಿಸುತ್ತಿರುವುದರಿಂದ ಒಂದು ಸಾವಿರಕ್ಕೂ ಹೆಚ್ಚು ಕುರಿಗಳು ಮತ್ತು ಜಾನುವಾರುಗಳಿಗೆ ನೀರಿನ ಆಸರೆ ಸಿಕ್ಕಂತಾಗಿದೆ.
ಈ ಬಾರಿಯ ಬಿರುಬೇಸಿಗೆಗೆ ಮಳ್ಳೂರಮ್ಮನ ಕೆರೆ ಒಣಗಿತ್ತು. ದೇವರಮಳ್ಳೂರು ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜಾನುವಾರುಗಳಿಗೆ ಈ ಕೆರೆಯೇ ನೀರಿನ ಆಸರೆ. ಹಾಗಾಗಿ ಕಳೆದ ಹದಿನೈದು ಇಪ್ಪತ್ತು ದಿನಗಳಿಂದ ಗ್ರಾಮ ಪಂಚಾಯಿತಿಯ ಸದಸ್ಯರು ಮತ್ತು ಸಿಬ್ಬಂದಿ ಜಾನುವಾರುಗಳ ಅನುಕೂಲಕ್ಕಾಗಿ ಪಂಚಾಯಿತಿಯ ಕೊಳವೆ ಬಾವಿಯಿಂದ ಕೆರೆಯಲ್ಲಿನ ಒಂದು ಕುಂಟೆಗೆ ನೀರನ್ನು ಹರಿಸುತ್ತಿದ್ದಾರೆ.
ದೇವರಮಳ್ಳೂರು ಸುಮರು 1300 ಜನರಿರುವ ದೊಡ್ಡ ಗ್ರಾಮ, ಬಹುತೇಕರು ಜಾನುವಾರುಗಳನ್ನು ಹೊಂದಿದ್ದಾರೆ. ಅದರಲ್ಲೂ ಕುರಿಸಾಕಾಣಿಕೆ ಹೆಚ್ಚು. ಹತ್ತಿರದ ಗ್ರಾಮಗಳಾದ ಕುತ್ತಾಂಡಹಳ್ಳಿ, ಮಾರಪ್ಪನಹಳ್ಳಿ, ವಾರಹುಣಸೇನಹಳ್ಳಿ, ದೊಗರನಾಯಕನಹಳ್ಳಿ ಸೇರಿದಂತೆ ಸಾಕಷ್ಟು ಕುರಿ ಮತ್ತು ಜಾನುವಾರುಗಳಿಗೆ ಮಳ್ಳೂರಮ್ಮನ ಕೆರೆಯ ನೀರೇ ಜೀವಜಲ.
“ದೇವರಮಳ್ಳೂರು ಗ್ರಾಮದಲ್ಲಿ ಕೊಳವೆಬಾವಿಗಳಲ್ಲಿ ನೀರಿರುವುದರಿಂದ ಜನರಿಗೆ ನೀರಿನ ಕೊರತೆಯಾಗಿಲ್ಲ. ಆದರೆ ಸಮಸ್ಯೆ ಎದುರಿಸುತ್ತಿದ್ದುದು, ಕುರಿ ಮತ್ತು ಜಾನುವಾರುಗಳು ಮಾತ್ರ. ಅದಕ್ಕಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಎಲ್ಲ ಸಿಬ್ಬಂದಿ ಸೇರಿ ಜಾನುವಾರುಗಳ ನೀರಿನ ಬವಣೆ ನೀಗಿಸಲು ಮುಂದಾಗಿದ್ದಾರೆ” ಎಂದು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗೋಪಾಲ್ ತಿಳಿಸಿದರು.
“ಮಳ್ಳೂರಮ್ಮನ ಕೆರೆಗೆ ಕೊಳವೆಬಾವಿಗಳಿಂದ ನೀರು ಪೂರೈಸಿ ಜಾನುವಾರುಗಳಿಗೆ ಕುಡಿಯಲು ನೀರಿನ ವ್ಯವಸ್ಥೆ ಮಾಡಿರುವುದು ನಿಜಕ್ಕೂ ಪುಣ್ಯದ ಕೆಲಸ. ದಿನಕ್ಕೆ ಏನಿಲ್ಲವೆಂದರೂ ಒಂದು ಸಾವಿರ ಕುರಿಗಳು ನೀರು ಕುಡಿಯುತ್ತವೆ. ನಾವೂ ಕೂಡ ನಮ್ಮ ಕುರಿಗಳನ್ನು ಇಲ್ಲಿಗೆ ಕಎತರುತ್ತೇವೆ” ಎಂದು ಕುರಿಗಾರರಾದ ವೆಂಕಟರಾಯಪ್ಪ ಮತ್ತು ಆಂಜಿನಪ್ಪ ಹೇಳಿದರು.