ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಅಂಗನವಾಡಿ ಕೇಂದ್ರವು ಸಾಕಷ್ಟು ಅವ್ಯವಸ್ಥೆಯಿಂದ ಕೂಡಿದ್ದು, ಉತ್ತಮ ಕಟ್ಟಡ ಸುರಕ್ಷಿತ ವಾತಾವರಣದ ಅತ್ಯಗತ್ಯವಿದೆ.
ಈ ಹಿಂದೆ ಗ್ರಾಮ ಪಂಚಾಯಿತಿಯ ಹಳೆಯ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರಕ್ಕೆ ಸ್ಥಳವನ್ನು ನೀಡಲಾಗಿತ್ತು. ಆಧುನಿಕ ಡಿಜಿಟಲ್ ಲೈಬ್ರರಿಯನ್ನು ಮಾಡುವ ಉದ್ದೇಶದಿಂದ ಅಂಗನವಾಡಿಯನ್ನು ಅಲ್ಲೇ ಇದ್ದ ಚಿಕ್ಕ ಕೋನೆಗೆ ವರ್ಗಾಯಿಸಿದ್ದಾರೆ.
ಇದೀಗ ಒಂದೇ ಕೋಣೆಯಲ್ಲಿ ಗ್ಯಾಸ್ ಸ್ಟೌವ್ ಇಟ್ಟು ಮಕ್ಕಳಿಗೆ ಅಡುಗೆ ಮಾಡಬೇಕಿದೆ. ಮಕ್ಕಳಿಗೆ ಪಾಠವೂ ಅಲ್ಲೇ ಊಟವೂ ಅಲ್ಲೇ, ಜೊತೆಗೆ ದಿನಸಿ ಸಾಮಗ್ರಿಯೂ ಅಲ್ಲೇ ಹಾಕಿಕೊಳ್ಳಬೇಕಿದೆ. ಹಳ್ಳ ಬಿದ್ದ ನೆಲದಲ್ಲಿಯೇ ಮಕ್ಕಳನ್ನು ಮಲಗಿಸಬೇಕಾದ ದುರವಸ್ಥೆಯಿದೆ.
ಈ ಕೋಣೆಯ ಸುತ್ತ ಕೂಡ ಸ್ಥಳವು ಸಮರ್ಪಕವಾಗಿಲ್ಲ. ಇಲ್ಲಿ ನೀರಿನ ಮತ್ತು ವಿದ್ಯುತ್ ವ್ಯವಸ್ಥೆ ಕೂಡ ಇಲ್ಲ. ಮಕ್ಕಳ ಶೌಚಕ್ಕೂ ಸ್ಥಳವಿಲ್ಲದಿರುವುದು ಇಲ್ಲಿನ ಅವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಕಿಟಕಿಗಳು ಹಾಳಾಗಿವೆ. ಇಲಿಗಳು ಬೇರೆ ಹುಳುಗಳು ಬಂದರು ಬರಬಹುದು. ಕೆಳಗಡೆಗೆ ಒಂದು ಜಮಖಾನೆ ಬಿಟ್ಟರೆ ಬೇರೆ ಚಾಪೆಗಳು ಸಹ ಇಲ್ಲ. ಈ ಬೇಸಿಗೆ ಸಮಯದಲ್ಲಿ ಮಕ್ಕಳಿಗೆ ಫ್ಯಾನ್ ಇಲ್ಲ, ಸುತ್ತಮುತ್ತ ಉತ್ತಮ ಗಾಳಿ ವಾತಾವರಣ ಕೂಡ ಇಲ್ಲವಾಗಿದೆ. ಮಳೆಗಾಲ ಬಂದರೆ ನಿತ್ಯ ಸುರಿಯುತ್ತದೆ.
“ಅಂಗನವಾಡಿ ಕೇಂದ್ರಕ್ಕೆ ಒಂದು ಕಟ್ಟಡ ಬೇಕೆಂದು ಗ್ರಾಮ ಪಂಚಾಯಿತಿಯವರಿಗೆ ಕೇಳಿದ್ದೇವೆ. ನಮ್ಮ ಇಲಾಖೆಯವರ ಗಮನಕ್ಕೂ ತರಲಾಗಿದೆ. ಒಂದು ತಿಂಗಳಿನಲ್ಲಿ ಹೊಸ ಕಟ್ಟಡ ಕೊಡುವುದಾಗಿ ಭರವಸೆ ನೀಡಿದ್ದಾರೆ. ಅಡುಗೆ ಮಾಡಲು, ರೇಷನ್ ಇಡಲು, ಮಕ್ಕಳನ್ನು ಕೂರಿಸಲು ಇರಲು ಒಂದೇ ಕೋಣೆ. ಇಲ್ಲಿ ಸುರಕ್ಷಿತ ವಾತಾವರಣವಿಲ್ಲ. ನಮ್ಮಲ್ಲಿ 25 ಮಕ್ಕಳಿದ್ದಾರೆ. ಅವರ ಸುರಕ್ಷತೆಗಾಗಿ ಕ್ರಮ ಕೈಗೊಳ್ಳಬೇಕು” ಎಂದು ಅಂಗನವಾಡಿ ಕಾರ್ಯಕರ್ತೆ ವೀಣಾ ತಿಳಿಸಿದರು.