Varadanayakanahalli, sidlaghatta : ಶಿಡ್ಲಘಟ್ಟ : ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಶಾಲೆಯ ಆವರಣದ ಗಿಡದಲ್ಲಿ ಕಂಡು ಬಂದ ವಿಶೇಷವಾದ ಕಂಬಳಿಹುಳು, ಶಿಕ್ಷಕರಿಗೆ ಪತಂಗದ ಪಾಠ ಹೇಳಲು ಅನುವು ಮಾಡಿಕೊಟ್ಟಿತು.
ಸುಮಾರಾಗಿ ತೋರು ಬೆರಳು ಗಾತ್ರದ ಹಳದಿ ಬಣ್ಣದ ಹುಳುವನ್ನು ಕಂಡು ಮಕ್ಕಳು ಅಚ್ಚರಿಗೊಳಗಾದರು. ಹುಳುವಿಗೆ ಬಾಲವೂ ಇತ್ತು. ಮೈಮೇಲೆ ಬಿಳಿ ಗೆರೆಗಳು ಮತ್ತು ಕಪ್ಪು ಚುಕ್ಕಿಗಳು ಇರುವುದನ್ನು ಕಂಡು ಬಂದವು.
ಶಿಕ್ಷಕ ನಾಗಭೂಷಣ್ ತಮ್ಮ ಮೊಬೈಲ್ ಮೂಲಕ ಫೋಟೋ ತೆಗೆದು ಅದರ ಜಾತಕವನ್ನು ಮಕ್ಕಳೆದುರು ಬಿಡಿಚಿಟ್ಟರು. ತಲೆ ಬುರುಡೆ ಪತಂಗದ ಕಂಬಳಿಹುಳು ಇದು. ಈ ಕಂಬಳಿ ಹುಳು ಕೋಶಾವಸ್ಥೆಯನ್ನು ತಲುಪಿ ನಂತರ ಪತಂಗವಾಗುತ್ತದೆ.
ಅದನ್ನು ಇಂಗ್ಲಿಷ್ ನಲ್ಲಿ ಡೆತ್ ಹೆಡ್ ಹಾಕ್ ಮಾತ್ (Death’s-head hawkmoth) ಎನ್ನುತ್ತಾರೆ ಎಂದು ವಿವರಿಸಿ ಆ ಪತಂಗದ ಚಿತ್ರವನ್ನು ಮಕ್ಕಳಿಗೆ ತೋರಿಸಿದರು. ಮಲ್ಲಿಗೆ ಜಾತಿಯ ಸಸ್ಯ ಈ ಕಂಬಳಿ ಹುಳುವಿನ ಆಹಾರ ಸಸ್ಯವಾಗಿದ್ದು, ಶಾಲೆಯ ಬಳಿಯ ಆ ಸಸ್ಯದ ಬಳಿಯೇ ಆ ಹುಳು ಕಂಡು ಬಂದಿದ್ದರಿಂದ ಅದರ ಎಲೆಗಳೇ ಈ ಹುಳುವಿನ ಆಹಾರ ಎಂದು ತೋರಿಸಿದರು.
“ಚಿಟ್ಟೆಗಳು ಮತ್ತು ಪತಂಗಗಳು ಒಂದೇ ಜಾತಿಯವು. ಆದರೆ ಕೆಲವು ವ್ಯತ್ಯಾಸಗಳಿವೆ. ಚಿಟ್ಟೆಗಳು ಹಗಲು ಜೀವಿಗಳಾದರೆ, ಪತಂಗಗಳು ನಿಶಾಚರಿಗಳು. ಚಿಟ್ಟೆಗಳು ರೆಕ್ಕೆಗಳನ್ನು ಮೇಲಕ್ಕೆ ಮಡಿಚುತ್ತವೆ. ಆದರೆ ಪತಂಗಗಳು ವಿಮಾನದ ರೆಕ್ಕೆಗಳಂತೆ ಅಡ್ಡಡ್ಡ ಅಗಲಿಸಿರುತ್ತವೆ.
ಚಿಟ್ಟೆಗಳ ಮೈ ಬಡಕಲು, ಮೀಸೆ ಅನ್ನೋದು ಬೆಂಕಿಕಡ್ಡಿ ಥರಾ. ಪತಂಗಗಳದ್ದು ಠೊಣಪರ ಮೈ. ಹಂಚಿಕಡ್ಡಿ ಮೀಸೆ. ನಿಶಾಚರ ಜೀವಿಗಳಾದ ಈ ಪತಂಗಗಳನ್ನು ನಾವು ನೋಡುವುದೇ ತೀರಾ ಕಡಿಮೆ. ಕಂಬಳಿ ಹುಳುಗಳು ಚೆನ್ನಾಗಿ ಎಲೆತಿಂದು ಬೆಳೆದ ಮೇಲೆ ಪ್ಯೂಪಾ ಆಗುವಾಗ ಮಣ್ಣಲ್ಲಿ ನೆಲದಲ್ಲಿ ಎಲೆಗಳ ಮರೆ ಸೇರಿಬಿಡುತ್ತವೆ” ಎಂದು ವಿವರಿಸಿದರು.