ತಾಲ್ಲೂಕಿನ ಎಲ್ಲಾ ಸಹಕಾರ ಸಂಘಗಳು ಇದೀಗ ಬ್ಯಾಂಕ್‌ಗಳಾಗಿ ಪರಿವರ್ತನೆಗೊಂಡಿದ್ದು ಆಯಾ ದಿನದ ವ್ಯವಹಾರ ಅಂದೇ ಗಣಕೀಕೃತವಾಗುವುದರಿಂದ ಪ್ರತಿಯೊಬ್ಬರೂ ಸಹಕಾರ ಸಂಘಗಳಲ್ಲಿ ಖಾತೆ ತೆರೆಯಲು ಮುಂದಾಗಬೇಕು ಎಂದು DCC Bank ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.
ಶಿಡ್ಲಘಟ್ಟ ತಾಲ್ಲೂಕಿನ ಬೆಳ್ಳೂಟಿ ಗೇಟ್‌ನಲ್ಲಿರುವ SLV ಕನ್ವೆಂಷನ್ ಹಾಲ್‌ನಲ್ಲಿ ಶುಕ್ರವಾರ ಡಿಸಿಸಿ ಬ್ಯಾಂಕ್ ಹಾಗು ಮಳಮಾಚನಹಳ್ಳಿ ರೇಷ್ಮೆ ಬೆಳೆಗಾರರ ಹಾಗು ರೈತರ ಸೇವಾ ಸಹಕಾರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಮಹಿಳಾ ಸ್ವಸಹಾಯ ಸಂಘಗಳ ಸಾಲ ವಿತರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರತಿಯೊಬ್ಬ ಬಡವನೂ ಆರ್ಥಿಕವಾಗಿ ಮುಂದುವರೆಯಬೇಕು, ಕಟ್ಟಕಡೆಯ ವ್ಯಕ್ತಿಗೂ ಸಹಕಾರ ಸಂಘಗಳಿಂದ ಸವಲತ್ತು ದೊರೆಯಬೇಕು ಎನ್ನುವ ಉದ್ದೇಶ ಸೇರಿದಂತೆ ಖಾಸಗಿ ಬಡ್ಡಿ ದಂಧೆ ನಡೆಸುವವರ ಹಾವಳಿಯಿಂದ ಈ ಬಾಗದ ರೈತರು ಸೇರಿದಂತೆ ಮಹಿಳೆಯರನ್ನು ತಪ್ಪಿಸುವುದೇ ನಮ್ಮ ಮುಖ್ಯ ಗುರಿಯಾಗಿದೆ ಎಂದರು.
ಪಡೆದ ಸಾಲ ಮರುಫಾವತಿ ಮಾಡುವಲ್ಲಿ ತಾಲ್ಲೂಕಿನ ತಾಯಂದಿರು ಪ್ರಾಮಾಣಿಕರಾಗಿದ್ದು ತಾಲ್ಲೂಕಿನಾಧ್ಯಂತ ಇರುವ ಎಲ್ಲಾ ವರ್ಗಗಳ ಮಹಿಳೆಯರಿಗೂ ಮುಂಬರುವ ದಿನಗಳಲ್ಲಿ ತಲಾ 1 ಲಕ್ಷ ರೂ ಸಾಲ ನೀಡುವ ಭರವಸೆ ನೀಡಿದ ಅವರು ಮಹಿಳೆಯರು ಆರ್ಥಿಕವಾಗಿ ಸಬಲರಾದರೆ ಮಾತ್ರ ಕುಟುಂಬ ಚೆನ್ನಾಗಿರುತ್ತದೆ. ಬ್ಯಾಂಕಿನಿಂದ ಸಿಗಬೇಕಾದ ಎಲ್ಲಾ ಸವಲತ್ತುಗಳನ್ನು ಒದಗಿಸಲು ಡಿಸಿಸಿ ಬ್ಯಾಂಕ್ ಸದಾ ಸಿದ್ದವಾಗಿರುತ್ತದೆ ಎಂದರು.
ಶಾಸಕ ವಿ.ಮುನಿಯಪ್ಪ ಮಾತನಾಡಿ ಡಿಸಿಸಿ ಬ್ಯಾಂಕ್ ಹಾಗು ಸಹಕಾರ ಸಂಘಗಳ ವತಿಯಿಂದ ಮಹಿಳಾ ಸ್ವ ಸಹಾಯ ಸಂಘಗಳಿಗೆ ವಿತರಣೆ ಮಾಡುತ್ತಿರುವ ಬಡ್ಡಿರಹಿತ ಸಾಲ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಬೆಳೆಯುವ ಜೊತೆಗೆ ನಿಗಧಿತ ಸಮಯದಲ್ಲಿ ಮರುಪಾವತಿ ಮಾಡುವ ಮೂಲಕ ಸಹಕಾರಿ ಕ್ಷೇತ್ರದ ಬಲವರ್ಧನೆಗೆ ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ಮಳಮಾಚನಹಳ್ಳಿ ರೇಷ್ಮೆ ಬೆಳೆಗಾರರ ಹಾಗು ರೈತರ ಸೇವಾ ಸಹಕಾರ ಸಂಘದ ಸುಮಾರು ೨೫ ಮಹಿಳಾ ಸ್ವಸಹಾಯ ಸಂಘಗಳಿಗೆ 1 ಕೋಟಿ 6 ಲಕ್ಷ 37 ಸಾವಿರ ಸಾಲ ವಿತರಣೆ ಮಾಡಲಾಯಿತು.
ತಾಲೂಕಿನಾಧ್ಯಂತ ಇರುವ ಎಲ್ಲಾ ಸಹಕಾರಿ ಸಂಘಗಳು ಶೇ ೧೦೦ ರಷ್ಟು ಗಣಕೀಕರಣ ಮಾಡಿರುವ ಹಿನ್ನಲೆಯಲ್ಲಿ ಎಲ್ಲಾ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸೇರಿದಂತೆ ಸಿಬ್ಬಂದಿಯನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಉಪಾದ್ಯಕ್ಷ ಎ.ನಾಗರಾಜ್, ಕೋಚಿಮುಲ್ ನಿರ್ದೇಶಕ ಆರ್.ಶ್ರೀನಿವಾಸ್, ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ, ಮಳಮಾಚನಹಳ್ಳಿ ಎಸ್ ಎಫ್ ಸಿ ಎಸ್ ಅಧ್ಯಕ್ಷ ಕೆ.ಎಂ.ರಾಮಕೃಷ್ಣಪ್ಪ, ಉಪಾದ್ಯಕ್ಷೆ ಮಾಲಿನಿ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಎಸ್.ಆನಂದ್, ಮೇಲ್ವಿಚಾರಕ ಕೆ.ವಿ.ಶ್ರೀನಾಥ್, ಮಳಮಾಚನಹಳ್ಳಿ ಎಸ್ ಎಫ್ ಸಿ ಎಸ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಂ.ಉಷಾರಾಣಿ, ಸೇರಿದಂತೆ ಸಂಘದ ಎಲ್ಲಾ ನಿರ್ದೇಶಕರು ಹಾಜರಿದ್ದರು.