ಕೋವಿಡ್ ವಿರುದ್ಧ ರೋಗನಿರೋಧಕ ಶಕ್ತಿ ಒದಗಿಸುವ ಮೂರನೇ ಹಂತದ ಅಭಿಯಾನವನ್ನು ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಪ್ರಾರಂಭಿಸಿದರು. ಸೋಮವಾರ 60 ವರ್ಷ ವಯಸ್ಸಿನ ಅಥವಾ ಅದಕ್ಕಿಂತ ಮೇಲ್ಪಟ್ಟವರಿಗೆ ಉಚಿತವಾಗಿ ಕೊರೊನಾ ಲಸಿಕೆಯನ್ನು ನೀಡಲಾಯಿತು.
“60 ವರ್ಷ ಮೇಲ್ಪಟ್ಟ ಹಾಗೂ 45 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಇತರೆ ಆನಾರೋಗ್ಯ (ಕೋಮಾರ್ಬಿಡಿಟಿ) ಸಮಸ್ಯೆಗಳನ್ನು ಹೊಂದಿರುವವರಿಗೆ ಲಸಿಕೆ ನೀಡಲಾಗುತ್ತಿದೆ. ಅರ್ಹ ವ್ಯಕ್ತಿಗಳು ಲಸಿಕೆ ಪಡೆಯುವುದಕ್ಕಾಗಿ ಕೋ–ವಿನ್ ಆ್ಯಪ್ ಅಥವಾ ಆರೋಗ್ಯ ಸೇತು ಆ್ಯಪ್ ಮೂಲಕ ಯಾವುದೇ ಸಮಯದಲ್ಲಿ, ಯಾವುದೇ ಸ್ಥಳದಿಂದ ಸಮಯ ಕಾಯ್ದಿರಿಸಬಹುದು” ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ತಿಳಿಸಿದರು.
“60 ವರ್ಷ ದಾಟಿದವರು ಲಸಿಕೆಗಾಗಿ ನೋಂದಣಿ ಮಾಡಿಕೊಳ್ಳಲು ಅರ್ಹರು. ಬೇರೆ ರೋಗಗಳನ್ನು ಹೊಂದಿರುವ, ಈಗಾಗಲೇ 45 ದಾಟಿದವರು ಕೂಡ ನೋಂದಣಿಗೆ ಅರ್ಹರು. 20 ಅನಾರೋಗ್ಯಗಳನ್ನು ಆರೋಗ್ಯ ಸಚಿವಾಲಯವು ಪಟ್ಟಿ ಮಾಡಿದೆ. ಒಂದು ಮೊಬೈಲ್ ಸಂಖ್ಯೆ ನೀಡಿ ಗರಿಷ್ಠ ನಾಲ್ಕು ಫಲಾನುಭವಿಗಳು ನೋಂದಣಿ ಮಾಡಿಕೊಳ್ಳಬಹುದು. ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್, ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್, ಎನ್‌ಪಿಆರ್ ಸ್ಮಾರ್ಟ್ ಕಾರ್ಡ್, ಭಾವಚಿತ್ರ ಇರುವ ಪೆನ್ಶನ್ ಪತ್ರದಲ್ಲಿ ಯಾವುದಾದರೂ ಒಂದನ್ನು ಬಳಸಿ ನೋಂದಣಿ ಮಾಡಬಹುದು. ಪ್ರತಿ ದಿನ ಸಂಜೆ 3 ಗಂಟೆಯವರೆಗೆ ಈ ಆಸ್ಪತ್ರೆಗೆ ಭೇಟಿ ನೀಡಿಯೂ ಲಸಿಕೆಗಾಗಿ ನೋಂದಣಿ ಮಾಡಿಕೊಳ್ಳಬಹುದು” ಎಂದು ಅವರು ವಿವರಿಸಿದರು.
“ನಮ್ಮ ತಾಲ್ಲೂಕು ಆಸ್ಪತ್ರೆಯಲ್ಲಿ 60 ವರ್ಷ ಮೇಲ್ಪಟ್ಟ ಜನರಿಗೆ ಉಚಿತವಾಗಿ ಕೋವಿಡ್ ಲಸಿಕೆಯನ್ನು ನೀಡುತ್ತಿದ್ದು, ಬರುವವರು ಆಧಾರ್, ಎಲೆಕ್ಷನ್ ಕಾರ್ಡ್ ಮತ್ತು ತಮ್ಮ ಮೊಬೈಲ್ ಅನ್ನು ತರಬೇಕು.ಹಿರಿಯ ನಾಗರಿಕರು ಇದರ ಸದುಪಯೋಗ ಮಾಡಿಕೊಳ್ಳಬೇಕು” ಎಂದು ಅವರು ಮನವಿ ಮಾಡಿದರು.