ಕೋವಿಡ್ ಮತ್ತು ಅತಿವೃಷ್ಟಿಗಳಿಂದ ತೊಂದರೆಗೆ ಒಳಗಾದ ಸಂತ್ರಸ್ತ ಕುಟುಂಬಗಳಿಗೆ ಅನಾಥ ಪ್ರಜ್ಞೆ ಕಾಡದಂತೆ ಅವರ ಜೀವನಕ್ಕೆ ಆಸರೆಯಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನೆರವಿನ ಹಸ್ತ ನೀಡಲಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಬೆಳ್ಳೂಟಿಯ ಎಸ್ ಎಲ್ ವಿ ಕಲ್ಯಾಣ ಮಂಟಪದಲ್ಲಿ ಗುರುವಾರ ಕೋವಿಡ್ ನಿಂದ ಮೃತ ಪಟ್ಟ ಫಲಾನುಭವಿಗಳ ಕುಟುಂಬಸ್ಥರಿಗೆ ಹಾಗೂ ಮಳೆ ಹಾನಿಯಾದ ಸಂತ್ರಸ್ತರಿಗೆ ಪರಿಹಾರ ಧನದ ಚೆಕ್ ಹಾಗೂ ಮಂಜೂರಾತಿ ಪತ್ರಗಳ ವಿತರಣೆ ಮಾಡಿ ವರು ಮಾತನಾಡಿದರು.
ಇಡೀ ವಿಶ್ವವೇ ಸಾಮೂಹಿಕ ರೋಗದಿಂದ ತೊಂದರೆಗೆ ಒಳಗಾಗಿ ಅಪಾರ ಪ್ರಮಾಣದ ಜೀವ ಹಾನಿಯಾಯಿತು. ಇದರೊಂದಿಗೆ ಜಿಲ್ಲೆಯಲ್ಲಿ 50 ವರ್ಷಗಳಲ್ಲೆ ಕಂಡು ಕೇಳರಿಯದ ಮಳೆಯಿಂದ ಅಪಾರ ಹಾನಿಗೆ ಒಳಗಾದ ಜನರ ಕಷ್ಟಗಳಿಗೆ ನೆರವಾಗಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಪರಿಹಾರ ನೀಡುತ್ತಿದ್ದು ಕೇವಲ ಒಂದೆರಡು ತಿಂಗಳಲ್ಲೇ ಬೆಳೆ ಹಾನಿಗೆ ಒಳಗಾದ ರೈತರಿಗೂ ಪರಿಹಾರ ಧನವನ್ನು ನೀಡಲಾಗಿದೆ ಎಂದರು.
ತಾಲ್ಲೂಕಿನಲ್ಲಿ ಕೋವಿಡ್ ನಿಂದ ಮೃತ ಪಟ್ಟ 45 ಕುಟುಂಬದ ಸದಸ್ಯರಿಗೆ ತಲಾ 1 ಲಕ್ಷ ರೂ ಗಳು, 12 ಕುಟುಂಬಗಳಿಗೆ ತಲಾ 50 ಸಾವಿರ ರೂಗಳಂತೆ ಒಟ್ಟು 57 ಮಂದಿಗೆ ಚೆಕ್ ವಿತರಣೆ ಮಾಡಲಾಯಿತು.
ಬಾರಿ ಮಳೆಯಿಂದ ಹಾನಿಗೊಳಗಾದ ರೈತರಿಗೆ ಹಾಗೂ ಮಳೆಯಿಂದ ಹಾನಿಗೊಳಗಾದ ಕುಟುಂಬ ಗಳಿಗೆ ಪರಿಹಾರ ಧನದ ಚೆಕ್ ಗಳನ್ನು ವಿತರಿಸಲಾಯಿತು. ಮಳೆಗೆ ಮನೆ ಹಾನಿಯಾದವರಿಗೆ ಎ ವಿಭಾಗದವರಿಗೆ ಐದು ಲಕ್ಷ , ಬಿ ವಿಭಾಗದವರಿಗೆ ಮೂರು ಲಕ್ಷ, ಸಿ ವಿಭಾಗಕ್ಕೆ ಐವತ್ತು ಸಾವಿರದಂತೆ 389 ಜನಕ್ಕೆ 3 ಕೋಟಿ 16 ಲಕ್ಷ ಪರಿಹಾರ ನೀಡುತ್ತಿರುವುದಾಗಿ ಹೇಳಿದರು.
30 ಕೋಟಿ ಅನುದಾನ:
ರಾಜ್ಯ ಸರ್ಕಾರ ನಗರಗಳ ಅಭಿವೃದ್ಧಿ ಗಾಗಿ ನಗರೋತ್ತಾನ ಯೋಜನೆಯಡಿ ತಲಾ 30 ಕೋಟಿ ರೂಗಳ ಸಹಾಯಧನವನ್ನು ಬಿಡುಗಡೆ ಮಾಡಲಾಗಿದ್ದು ಈ ಕೂಡಲೇ ಕ್ರಿಯಾಯೋಜನೆ ಸಿದ್ಧಪಡಿಸಿ ಒಂದು ವರ್ಷದ ಒಳಗಾಗಿ ಕಾಮಾಗಾರಿಗಳನ್ನು ಮುಗಿಸಲು ಸೂಚಿಸಿದರು.
ಸಂಸದ ಮುನಿಸ್ವಾಮಿ ಮಾತನಾಡಿ, ದಕ್ಷ ಮತ್ತು ಪ್ರಾಮಾಣಿಕ ಪ್ರಧಾನಿಗಳ ಸತತ ಶ್ರಮದಿಂದ ದೇಶದ ವಿಜ್ಞಾನಿಗಳು ಪಟ್ಟ ಶ್ರಮದಿಂದ ಕೋವಿಡ್ ನಿಯಂತ್ರಣ ಮಾಡಲಾಯಿತು. ಇಡೀ ರಾಷ್ಟ್ರದಲ್ಲೇ ರಾಜ್ಯದಲ್ಲಿ ಅತ್ಯಧಿಕ ರೋಗ ನಿರೋಧಕ ಲಸಿಕೆಯನ್ನು ಹಾಕಲಾಗಿದೆ. ಪರಿಹಾರ ಧನದಲ್ಲಿ ಸೋರಿಕೆ ಯಾಗದಂತೆ ದಳ್ಳಾಳಿಗಳ ಹಾವಳಿ ತಡೆದು ನೇರವಾಗಿ ಸಂತ್ರಸ್ತರ ಬ್ಯಾಂಕ್ ಖಾತೆಗಳಿಗೆ ಪರಿಹಾದ ಧನವನ್ನು ಕೊಡಲಾಗಿದೆ ಎಂದರು.
ಶಾಸಕ ವಿ ಮುನಿಯಪ್ಪ ಮಾತನಾಡಿ, ತಾಲ್ಲೂಕಿನ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೆರವಿನ ಹಸ್ತ ನೀಡಿರುವುದನ್ನು ಸ್ವಾಗತಿಸಿ ಧನ್ಯವಾದ ಅರ್ಪಿಸಿದರು.
ಜಿಲ್ಲಾಧಿಕಾರಿ ಆರ್.ಲತಾ, ತಹಶೀಲ್ದಾರ್ ಬಿ.ಎಸ್.ರಾಜೀವ್, ಕಾರ್ಯ ನಿರ್ವಹಣಾಧಿಕಾರಿ ಚಂದ್ರಕಾಂತ್, ಪೌರಾಯುಕ್ತ ಶ್ರೀಕಾಂತ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಸಿ.ನಂದೀಶ್, ಬೆಳ್ಳೂಟಿ ಸಂತೋಷ್, ಆನೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ನೇತ್ರಾವತಿ ಹಾಜರಿದ್ದರು.
ರೈತರ ಮನವಿ :
ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಸಾಮೂಹಿಕ ನಾಯಕತ್ವದ ರೈತ ಸಂಘದ ಸದಸ್ಯರು ಮನವಿ ಸಲ್ಲಿಸಿ, ಅನ್ನದಾತರ ಸಮಸ್ಯೆಗಳನ್ನು ಬಗೆಹರಿಸುವಂತೆ ಕೋರಿದರು. ಕೆರೆ, ಕುಂಟೆಗಳ ಅಕ್ರಮ ಒತ್ತುವರಿ ತೆರವು ಮಾಡದಿರುವುದು, ಕೆರೆಗಳಲ್ಲಿ ಬೆಳೆದಿರುವ ಜಾಲಿಮರಗಳ ತೆರವು, ಬೆಳೆ ನಷ್ಟ ಪರಿಹಾರ ಹಾಗೂ ಬೆಂಬಲ ಬೆಲೆ ಯೋಜನೆಯಡಿ ರೈತರ ರಾಗಿ ಮಾರಾಟ ಮಾಡಲು ಮತ್ತಿತರ ಸಮಸ್ಯೆಗಳನ್ನು ಬಗೆಹರಿಸುವಂತೆ ಕೋರಿ ಮನವಿ ಸಲ್ಲಿಸಿದರು.
ನಗರದ ಪಕ್ಕದಲ್ಲೇ ಇರುವ ಗೌಡನಕೆರೆಯಲ್ಲಿ ಜಾಲಿ ಮರಗಳನ್ನು ತೆಗೆಯುವುದು, ಮುಚ್ಚಿಹೋದ ರಾಜಕಾಲುವೆಗಳನ್ನು ತೆರವು ಮಾಡಿ ಅಕ್ರಮ ಒತ್ತುವರಿ ತೆರವು ಮಾಡಬೇಕು. ಎಚ್.ಎನ್.ವ್ಯಾಲಿ ನೀರು ಕೆರೆಗಳಿಗೆ ಹರಿಸುವುದನ್ನು ನಿಲ್ಲಿಸಲಾಗಿದೆ. ನೀರು ಬಿಡಬೇಕು ಎಂದು ಕೋರಿದರು.
ಸಚಿವರು ಜಿಲ್ಲೆಯಲ್ಲಿ ಕೆರೆಗಳು ತುಂಬಿರುವ ಕಾರಣ ನಿಲ್ಲಿಸಿದ್ದೇವೆ, ಎಚ್.ಎನ್.ವ್ಯಾಲಿ ಯೋಜನೆ ಅಧಿಕಾರಿಗಳಿಗೆ ಹೇಳಿ ನೀರು ಬಿಡಿಸುತ್ತೇನೆ. ಗೌಡನಕರೆಯಲ್ಲಿ ಜಾಲಿಗಿಡಗಳ ತೆರೆವಿಗೆ ಜಿಲ್ಲಾಧಿಕಾರಿ ಅವರಿಗೆ ಹೇಳುವೆ. ರಾಗಿಯ ವಿಚಾರದಲ್ಲು ಚರ್ಚೆ ಮಾಡಿ ಸಮಸ್ಯೆ ಬಗೆಹರಿಸುತ್ತೇವೆ ಎಂದರು.