ನಗರದ ನ್ಯಾಯಾಲಯ ಸಂಕೀರ್ಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಸಂಯುಕ್ತಾಶ್ರಯದಲ್ಲಿ ಸೋಮವಾರ ನಡೆದ “ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ ಹಾಗೂ ಭಾರತದ ಅಮೃತ ಮಹೋತ್ಸವ – 2021” ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಡಿ.ಆರ್.ಮಂಜುನಾಥ್ ಮಾತನಾಡಿದರು.
ಗ್ರಾಹಕರಿಗೆ ಸಮರ್ಪಕ ಸೇವೆ ದೊರೆಯದಿದ್ದಾಗ ಸೂಕ್ತ ಪರಿಹಾರ ಪಡೆಯಲು ಗ್ರಾಹಕರ ಹಿತರಕ್ಷಣಾ ಕಾಯ್ದೆ ತುಂಬಾ ಉಪಯುಕ್ತವಾಗಿದ್ದು, ವಿದ್ಯಾರ್ಥಿಗಳು ಈ ಕಾಯ್ದೆಯ ಮಹತ್ವ ಹಾಗೂ ಅದರ ಉಪಯೋಗವನ್ನು ತಿಳಿಯುವುದಲ್ಲದೇ ನೊಂದ ಗ್ರಾಹಕರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಅರಿವು ಮೂಡಿಸಬೇಕು ಎಂದು ಅವರು ತಿಳಿಸಿದರು.
ಗ್ರಾಹಕ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಯಾವುದೇ ಕಾರಣಕ್ಕೂ ಗ್ರಾಹಕರು ಮೋಸಕ್ಕೆ ತುತ್ತಾಗಬಾರದು. ನಾವು ಪಡೆಯುವ ಗ್ರಾಹಕ ಸೇವೆಗಳ ಬಗ್ಗೆ ಎಚ್ಚರವಿರಬೇಕು. ಪದಾರ್ಥಗಳಲ್ಲಿನ ಕಾಲಾವಧಿ ಬಗ್ಗೆ ಯೋಚಿಸಿ ಪಡೆಯಬೇಕು. ಗ್ರಾಹಕರಿಗೆ ವಿಶೇಷವಾದ ಕಾಯ್ದೆಯಿದ್ದು, ಇದನ್ನು ಬಳಸಿಕೊಳ್ಳುವಂತಾಗಬೇಕು. ಗ್ರಾಹಕ ಹಕ್ಕುಗಳ ಬಗ್ಗೆ ಮಾಹಿತಿ ಪಡೆಯುವಂತಾಗಬೇಕು ಎಂದು ಹೇಳಿದರು.
ಇದು ಸಮಸ್ತ ಭಾರತೀಯರ ಸಂಭ್ರಮಾಚರಣೆಯ ಪರ್ವ. 2022ರ ಆಗಸ್ಟ್ 15ರಂದು ಸ್ವತಂತ್ರ ಭಾರತ 75 ವರ್ಷಗಳನ್ನು ಪೂರ್ಣಗೊಳಿಸಲಿದೆ. ಈ ಸಂದರ್ಭದಲ್ಲಿ ಒಂದೆಡೆ ಆತ್ಮವಲೋಕನ ಮಾಡಿಕೊಳ್ಳುತ್ತಾ ಭವಿಷ್ಯವನ್ನು ಉತ್ತಮಗೊಳಿಸಲು ಪ್ರಯತ್ನಿಸಬೇಕು ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸಂಜುಕುಮಾರ್ ಎ.ಪಚ್ಚಾಪುರೆ, ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಟಿ.ವಿ.ಚಂದ್ರಶೇಖರ ಗೌಡ, ಕಾರ್ಯದರ್ಶಿ ಎಂ.ಬಿ.ಲೋಕೇಶ್, ಹಿಂದುಳಿದ ವರ್ಗಗಳ ತಾಲ್ಲೂಕು ಕಲ್ಯಾಣಾಧಿಕಾರಿ ಎಸ್.ಎನ್.ನಾರಾಯಣಪ್ಪ, ಹಿಂದುಳಿದ ವರ್ಗಗಳ ತಾಲ್ಲೂಕು ವಿಸ್ತರಣಾಧಿಕಾರಿ ಆರ್.ಸತ್ಪಾಲ್, ಅರಿಕೆರೆ ಶ್ರೀನಿವಾಸ್ ಹಾಜರಿದ್ದರು.