Y Hunasenahalli, Sidlaghatta : ನಾಡಿನ ಎಲ್ಲ ಜನಪ್ರತಿನಿಧಿಗಳು, ರಾಜಕಾರಣಿಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರದ ಎಲ್ಲ ಅಧಿಕಾರಿ, ಸಿಬ್ಬಂದಿಗಳು ಸಂವಿಧಾನದ ಆಶಯದಂತೆ ಮೊದಲು ನಡೆದುಕೊಳ್ಳುವ ಕೆಲಸ ಆಗಬೇಕು, ಆಗಲೆ ಉತ್ತಮ ಸಮಾಜ ನಿರ್ಮಾಣವಾಗಲಿದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ಶಿಡ್ಲಘಟ್ಟ-ಚಿಂತಾಮಣಿಯ ಗಡಿಭಾಗದ ವೈ.ಹುಣಸೇನಹಳ್ಳಿಯಲ್ಲಿ ಸಂವಿಧಾನ ಜಾಗೃತಿ ರಥವನ್ನು ಬರ ಮಾಡಿಕೊಂಡು ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ನಾಡು, ದೇಶಕ್ಕಾಗಿ ಮಹಾತ್ಮಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್, ಲಾಲ್ ಬಹದುದ್ದೂರ್ ಶಾಸ್ತ್ರಿ, ಬಸವಣ್ಣ ಇನ್ನಿತರೆ ಅನೇಕ ಮಹನೀಯರು ತಾನು ತನ್ನದು ಎಂಬ ಸ್ವಾರ್ಥಬಿಟ್ಟು ಸಮಾಜಕ್ಕಾಗಿ ತನು ಮನ ಅರ್ಪಿಸಿದ್ದರಿಂದಲೆ ೧೪೦ ಕೋಟಿ ಮಂದಿ ನೆಮ್ಮದಿಯ ಬದುಕನ್ನು ಕಾಣುತ್ತಿದ್ದೇವೆ ಎಂದರು.
ಸ್ವಾತಂತ್ರ್ಯಕ್ಕೂ ಮುನ್ನ ಬ್ರಿಟೀಷರ ಕಾಲದಲ್ಲಿ ನಮ್ಮ ಹಿರಿಯರು ಅನುಭವಿಸಿದ ಕಷ್ಟ ಕೋಟಲೆಗಳು ಇತಿಹಾಸವನ್ನು ಓದಿ ತಿಳಿದುಕೊಳ್ಳುವುದರಿಂದ ತಿಳಿಯುತ್ತದೆ. ಆ ಕಷ್ಟದಿಂದ ನಮ್ಮ ಹಿರಿಯರನ್ನು, ದೇಶವನ್ನು ಕಾಪಾಡಿದ ಅನೇಕ ದೇಶಪ್ರೇಮಿಗಳು, ಸ್ವಾತಂತ್ರ್ಯ ಹೋರಾಟಗಾರರು, ಮಹನೀಯರನ್ನು ನಾವು ಸ್ಮರಿಸಬೇಕು. ಜಗತ್ತಿನಲ್ಲೇ ಶ್ರೇಷ್ಠವಾದ ಸಂವಿಧಾನವನ್ನು ನಮ್ಮ ಡಾ.ಬಿ.ಆರ್.ಅಂಬೇಡ್ಕರ್ ಅವರು ನಮಗೆ ನೀಡಿದ್ದು ಅದರಿಂದಲೆ ಈ ಸಮಾಜದ ಎಲ್ಲ ಜನರಿಗೂ ಕಾನೂನಿನ ರಕ್ಷಣೆಯಿಂದ ನೆಮ್ಮದಿಯ ಬದುಕನ್ನು ನಡೆಸುವಂತಾಗಿದ್ದು ಎಲ್ಲರೂ ಸಹ ಸಂವಿಧಾನದ ಆಶಯದಂತೆ ಬದುಕನ್ನು ನಡೆಸಬೇಕು ಎಂದು ಮನವಿ ಮಾಡಿದರು.
ತಹಸೀಲ್ದಾರ್ ಬಿ.ಎನ್.ಸ್ವಾಮಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂವಿಧಾನದ ಶ್ರೇಷ್ಠತೆ ಮಹತ್ವದ ಬಗ್ಗೆ ವಿವರಿಸಿದರು. ತಾಲೂಕು ಪಂಚಾಯಿತಿ ಇಒ ಜಿ.ಮುನಿರಾಜು ಅವರು ಸಂವಿಧಾನದ ಪೀಠಿಕೆಯ ಪ್ರಮಾಣ ವಚನವನ್ನು ಬೋಸಿದರು.
ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಮಾಡಿ ಪುಷ್ಪ ನಮನ ಸಲ್ಲಿಸಲಾಯಿತು. ಕೇಕ್ ಕತ್ತರಿಸಿ ಸಿಹಿ ಹಂಚಲಾಯಿತು.
ಬಿಇಒ ಸುರೇಂದ್ರ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಜಗದೀಶ್, ಸಿಪಿಐ ಎಂ.ಶ್ರೀನಿವಾಸ್, ಮುಖಂಡರಾದ ಬಂಕ್ ಮುನಿಯಪ್ಪ, ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ವೈ.ಹುಣಸೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾರಾಯಣಸ್ವಾಮಿ, ಪಿಡಿಒ ರಮಾಕಾಂತ್, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಮಂಜುನಾಥ್, ಸಫಾಯಿ ಕರ್ಮಚಾರಿ ಪುನರ್ವಸತಿ ಸಮಿತಿ ಸದಸ್ಯ ಸಿ.ವಿ.ಲಕ್ಷ್ಮಣರಾಜು, ಅಶೋಕ್‌ಮೌರ್ಯ, ರಮೇಶ್, ಕುಂದಲಗುರ್ಕಿ ಮುನೀಂದ್ರ, ಅರುಣ್‌ಕುಮಾರ್, ರೈತ ಸಂಘದ ಪ್ರತೀಶ್, ಕನ್ನಡ ಸಂಘದ ರಾಮಾಂಜಿ ಇನ್ನಿತರೆ ಮುಖಂಡರು ವೇದಿಕೆಯಲ್ಲಿದ್ದರು.