Sidlaghatta : ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜೀವ್‌ಗೌಡ ಅವರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಮತ ಹಾಕಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿ, ಕಾಂಗ್ರೆಸ್ ಪಕ್ಷ ನನ್ನ ತಾಯಿ ಇದ್ದಂತೆ, ಮತದಾರರ ತೀರ್ಪನ್ನು ನಾನು ಸ್ವೀಕರಿಸುತ್ತೇನೆ ಎಂದು ಅವರು ತಿಳಿಸಿದರು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಚುನಾವಣೆ ಮುಗಿದು ಫಲಿತಾಂಶವೂ ಬಂದಾಗಿದೆ. ಫಲಿತಾಂಶ ಬಂದಾದ ನಂತರ ಕಾಂಗ್ರೆಸ್‌ನ ಅಭ್ಯರ್ಥಿ ರಾಜೀವ್‌ಗೌಡ ಅವರು ಶಿಡ್ಲಘಟ್ಟ ನಗರದ ಕಾಂಗ್ರೆಸ್ ಭವನದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ನಂತರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೆ ಪ್ರಭುಗಳು, ಪ್ರಭುಗಳು ನೀಡಿದ ತೀರ್ಪನ್ನು ತಲೆ ಬಾಗಿ ನಮಿಸಿ ಸ್ವೀಕರಿಸುತ್ತೇನೆ, ನನ್ನನ್ನು ಹಾಗೂ ಕಾಂಗ್ರೆಸ್ ಪಕ್ಷವನ್ನು ಗುರ್ತಿಸಿ ಮತ ಹಾಕಿದ ಎಲ್ಲ ಮತದಾರರಿಗೂ, ಪಕ್ಷದ ಮುಖಂಡರು, ಕಾರ್ಯಕರ್ತರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.
ಈ ಸೋಲನ್ನು ನಾನು ಸ್ವಾಗತಿಸುತ್ತೇನೆ, ಸೋಲಿನಿಂದ ನಾನು ಧೃತಿಗೆಡುವುದಿಲ್ಲ. ಶಿಡ್ಲಘಟ್ಟ ತಾಲ್ಲೂಕಿನಲ್ಲಿಯೆ ಇದ್ದು, ಈ ಕ್ಷೇತ್ರದ ಜನರ, ಕಾರ್ಯಕರ್ತರ, ಮತದಾರರ ಕಷ್ಟ ಸುಖಗಳಿಗೆ ಸ್ಪಂದಿಸುತ್ತೇನೆ ಎಂದರು.
ಈ ಸೋಲಿನ ಪರಾಮರ್ಶೆ ನಡೆಸಿ ನನ್ನ ಹಾಗೂ ಪಕ್ಷದ ಮುಖಂಡರ ತಪ್ಪು ನೆಪ್ಪುಗಳ ಬಗ್ಗೆ ಚರ್ಚಿಸಿ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದಿನ ಹೆಜ್ಜೆ ಇಡಲಿದ್ದೇವೆ. ಮುಂದಿನ ಎಲ್ಲ ಚುನಾವಣೆಗಳನ್ನು ಒಗ್ಗಟ್ಟಿನಿಂದ ಎದುರಿಸಿ ಪಕ್ಷವನ್ನು ಇನ್ನಷ್ಟು ಸಂಘಟಿಸಿ ಮತ್ತೆ ಅಧಿಕಾರಕ್ಕೆ ಬರುವಂತೆ ಮಾಡುವ ತನಕ ವಿರಮಿಸುವುದಿಲ್ಲ ಎಂದರು.
ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಕೆ.ಗುಡಿಯಪ್ಪ, ಟಿ.ಕೆ.ನಟರಾಜ್, ನಿರಂಜನ್, ಬಾಬಾ, ನಾಗರಾಜ್ ಹಾಜರಿದ್ದರು.