Sidlaghatta : ವ್ಯಕ್ತಿಗಿಂತ ಪಕ್ಷ ಮುಖ್ಯ ಪಕ್ಷಕ್ಕಿಂತಲೂ ದೇಶ ಮುಖ್ಯ. ಹಾಗಾಗಿ ಎಲ್ಲರೂ ತಮ್ಮ ತಮ್ಮ ವೈಯಕ್ತಿಕ ಪ್ರತಿಷ್ಠೆಯನ್ನು ಬದಿಗಿಟ್ಟು ಪಕ್ಷದ ಸಂಘಟನೆ, ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ನಗರದಲ್ಲಿನ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೆಪಿಸಿಸಿ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ಮಾಜಿ ಸಚಿವ ವಿ.ಮುನಿಯಪ್ಪ ಅವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಡ್ಲಘಟ್ಟದಲ್ಲಿ ಕಳೆದ ನಾಲ್ಕು ದಶಕಗಳಿಂದಲೂ ಪಕ್ಷವನ್ನು ಕಟ್ಟಿ ಬೆಳೆಸಿದವರು ವಿ.ಮುನಿಯಪ್ಪನವರು. ಅವರ ಕಟ್ಟಿ ಬೆಳೆಸಿ ಸುಭದ್ರಪಡಿಸಿರುವ ಪಕ್ಷವನ್ನು ನಾವೆಲ್ಲರೂ ಸೇರಿ ಉಳಿಸಿಕೊಂಡು ಮುಂದಕ್ಕೆ ಸಾಗುವ ಕೆಲಸ ಆಗಬೇಕಿದೆ ಎಂದು ಹೇಳಿದರು.
ಕಳೆದ ವಿಧಾನಸಭೆ ಚುನಾವಣೆ ನಂತರ ರಾಜೀವ್ ಗೌಡರು ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ಇದೀಗ ಪುಟ್ಟು ಆಂಜಿನಪ್ಪ ಅವರು ಕೂಡ ಕಾಂಗ್ರೆಸ್ ಗೆ ಸೇರ್ಪಡೆ ಆಗಿದ್ದಾರೆ. ರಾಜೀವ್ ಗೌಡ ಮತ್ತು ಪುಟ್ಟು ಆಂಜಿನಪ್ಪ ಅವರಿಬ್ಬರೂ ಎರಡು ಕಣ್ಣುಗಳಿದ್ದಂತೆ ಎಂದರು.
ಹಿರಿಯರಾದ ವಿ.ಮುನಿಯಪ್ಪ ಅವರ ನಾಯಕತ್ವದಲ್ಲಿ ರಾಜೀವ್ ಗೌಡ ಮತ್ತು ಪುಟ್ಟು ಆಂಜಿನಪ್ಪ ಅವರು ಮತ್ತು ಅವರ ಬೆಂಬಲಿಗರು ಸಾಗಬೇಕು. ಇದುವರೆಗೂ ನಡೆದುಕೊಂಡು ಬಂದಂತೆ ರಾಜೀವ್ ಗೌಡರೆ ಮುನಿಯಪ್ಪ ನೇತೃತ್ವದಲ್ಲಿ ಪಕ್ಷವನ್ನು ಮುನ್ನಡೆಸಲಿದ್ದಾರೆ. ಅವರು ಪುಟ್ಟು ಆಂಜಿನಪ್ಪ ಅವರನ್ನು ಸೇರಿದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಾಗಬೇಕಿದ್ದು, ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ವಿ.ಮುನಿಯಪ್ಪ ಅವರು, ಪಕ್ಷವನ್ನು ಕಳೆದ ನಾಲ್ಕು ದಶಕಗಳಿಂದಲೂ ಕಟ್ಟಿ ಬೆಳೆಸಿದ್ದೇನೆ, ಪಕ್ಷವೂ ನನಗೆ ಎಲ್ಲವನ್ನೂ ಕೊಟ್ಟಿದೆ. ಪಕ್ಷವನ್ನು ಹಾಳು ಮಾಡುವುದು ಬೇಡ ಎಂದರು.
ಪಕ್ಷದಲ್ಲಿ ಅರ್ಹರಿಗೆ ಸ್ಥಾನ ಮಾನ ಸಿಗಬೇಕು. ಆ ನಿಟ್ಟಿನಲ್ಲಿ ಪಕ್ಷದ ವರಿಷ್ಠರು ತೀರ್ಮಾನಗಳನ್ನು ಕೈಗೊಳ್ಳಲಿದ್ದು ಎಲ್ಲರೂ ಸೇರಿ ಪಕ್ಷವನ್ನು ಕಟ್ಟೋಣ ಬೆಳೆಸೋಣ ಎಂದು ಮನವಿ ಮಾಡಿದರು.
ಮುಖಂಡ ರಾಜೀವ್ ಗೌಡ ಮಾತನಾಡಿ, ಈ ಹಿಂದೆ ಆಗಿದ್ದೆಲ್ಲವೂ ಆಗಿದೆ. ಪಕ್ಷದ ಹಿತದೃಷ್ಟಿಯಿಂದ ಹಿಂದೆ ನಡೆದದ್ದೆಲ್ಲವನ್ನೂ ನಾನು ಹಾಗೂ ಪುಟ್ಟು ಆಂಜಿನಪ್ಪ ಅವರು ಮರೆಯಬೇಕಿದೆ ಹಾಗೂ ಎಲ್ಲರನ್ನೂ ಒಗ್ಗೂಡಿಸಿಕೊಂಡು ಸಾಗಬೇಕಿದೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನನ್ನನ್ನು ಕರೆದು ಮಾತನಾಡಿಸಿ ಪಕ್ಷದ ಸಂಘಟನೆ, ಲೋಕಸಭೆಯಲ್ಲಿ ಅಭ್ಯರ್ಥಿ ಗೌತಮ್ ಗೆಲುವಿನ ಹಿತದೃಷ್ಟಿಯಿಂದ ನನಗೆ ಕೆಲವೊಂದು ಸಲಹೆ ಸೂಚನೆ ನೀಡಿ ಪಕ್ಷದ ಕಾರ್ಯಾಧ್ಯಕ್ಷ, ರಾಜ್ಯಸಭೆ ಸದಸ್ಯರೂ ಆದ ಚಂದ್ರಶೇಖರ್ ಅವರನ್ನು ಭೇಟಿ ಮಾಡುವಂತೆ ಸೂಚಿಸಿದರು.
ಅದರಂತೆ ನಾನು ಚಂದ್ರಶೇಖರ್ ಅವರನ್ನು ಭೇಟಿ ಮಾಡಿದೆ. ಆಗ ಪುಟ್ಟು ಆಂಜಿನಪ್ಪ, ಶಶಿಧರ್ ಮುನಿಯಪ್ಪ ಅವರಷ್ಟೆ ಇದ್ದರು. ಅಲ್ಲಿ ಚರ್ಚೆ ಆದಂತೆ ಅವರು ಹೇಳಿದಂತೆ ಪಟ್ಟು ಆಂಜಿನಪ್ಪ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜತೆಗಿಟ್ಟುಕೊಂಡು ಮುನಿಯಪ್ಪ ಅವರ ನಾಯಕತ್ವದಲ್ಲಿ ನಾನು ಪಕ್ಷದ ಎಲ್ಲ ಕೆಲಸ ಕಾರ್ಯಗಳನ್ನು ಮಾಡುತ್ತೇನೆಂದರು.
ಪುಟ್ಟು ಆಂಜಿನಪ್ಪ ಮಾತನಾಡಿ, ಇಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ, ಹಾಗಾಗಿ ನಾನಾಗಲಿ ರಾಜೀವ್ ಗೌಡರಾಗಲಿ ವೈಯಕ್ತಿಕ ಪ್ರತಿಷ್ಠೆಯನ್ನು ಬಿಟ್ಟು ಪಕ್ಷಕ್ಕಾಗಿ ಕೆಲಸ ಮಾಡೋಣ. ಗೌತಮ್ ಅವರನ್ನು ಗೆಲ್ಲಿಸೋಣ. ಮುಂದಿನ ದಿನಗಳಲ್ಲಿ ಸಣ್ಣ ಪುಟ್ಟ ವ್ಯತ್ಯಾಸಗಳು ಆದಲ್ಲಿ ನನ್ನ ಬೆಂಬಲಿಗರು ಹೊಂದಿಕೊಂಡು ಹೋಗತಕ್ಕದ್ದು. ಅದೇ ನೀವು ನನಗೆ ತೋರುವ ಅಭಿಮಾನ ಪ್ರೀತಿ ಎಂದು ತಮ್ಮ ಬೆಂಬಲಿಗರಿಗೆ ಹೇಳಿದರು.
ವಿ.ಮುನಿಯಪ್ಪ ಅವರು ಕೆಪಿಸಿಸಿ ಉಪಾಧ್ಯಕ್ಷರಾಗಿ ನೇಮಕವಾಗಿದ್ದಕ್ಕೆ ಅವರನ್ನು ಸನ್ಮಾನಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನಾ ರಾಜೀವ್ ಗೌಡ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಶಶಿಧರ್ ಮುನಿಯಪ್ಪ, ಕೋಚಿಮುಲ್ ನಿರ್ದೇಶಕ ಆರ್.ಶ್ರೀನಿವಾಸ್ ರಾಮಯ್ಯ, ಡಾಲ್ಫಿನ್ ನಾಗರಾಜ್, ಗುಡಿಯಪ್ಪ, ವಿ.ಸುಬ್ರಮಣಿ ಹಾಜರಿದ್ದರು.