ಶಿಡ್ಲಘಟ್ಟ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರು ಎನ್ನುವ ಬಗ್ಗೆ ಯಾವುದೇ ಗೊಂದಲಬೇಡ. ವಿ.ಮುನಿಯಪ್ಪ ಪಕ್ಷದ ಹಿರಿಯ ಮುಖಂಡರು, ಹಾಲಿ ಶಾಸಕರು ಆಗಿರುವ ಅವರ ನೇತೃತ್ವದಲ್ಲಿಯೇ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ನಡೆಯಲಿದೆ. ಯಾರೇ ಆದರೂ ಅವರ ಕೈ ಕೆಳಗೆ ದುಡಿಯಬೇಕು, ಈ ಬಗ್ಗೆ ಯಾವುದೇ ಚರ್ಚೆಗೆ ಅವಕಾಶ ನೀಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಪಕ್ಷ ಸಂಘಟನೆ ಮತ್ತು ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಯಕರ್ತರೇ ಕಾಂಗ್ರೆಸ್ ಪಕ್ಷದ ಆಧಾರ ಸ್ಥಂಭಗಳಾಗಿದ್ದು 12 ವರ್ಷಗಳ ನಂತರ ಆರಂಭವಾಗಿರುವ ಡಿಜಿಟಲ್ ಸದಸ್ಯತ್ವ ನೋಂದಣಿ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಸದಸ್ಯತ್ವ ನೋಂದಣಿ ಮಾಡಿಸಬೇಕು. ಮುಂದಿನ ದಿನಗಳಲ್ಲಿ ನಡೆಯಲಿರುವ ಕೆಪಿಸಿಸಿ, ಜಿಲ್ಲಾ ಕಾಂಗ್ರೆಸ್, ಬ್ಲಾಕ್ ಕಾಂಗ್ರೆಸ್, ಬೂತ್ ಕಮಿಟಿ ಚುನಾವಣೆಗಳಲ್ಲಿ ಮತ ಚಲಾಯಿಸಬೇಕಾದರೆ ಸದಸ್ಯತ್ವ ಆಗುವುದು ಕಡ್ಡಾಯ ಹಾಗಾಗಿ ಪ್ರತಿಯೊಬ್ಬರೂ ಕಾಂಗ್ರೆಸ್ ಸದಸ್ಯತ್ವ ಪಡೆಯುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಪಡಿಸುವ ಕೆಲಸಕ್ಕೆ ಮುಂದಾಗಬೇಕು ಎಂದರು.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ. ಇಂತಹ ಭ್ರಷ್ಟ ಸಕಾರವನ್ನು ಜನ ಕಿತ್ತೊಗೆಯಬೇಕು. ಅದಕ್ಕಾಗಿ ಕಾಂಗ್ರೆಸ್ ಪಕ್ಷದ ಸದಸ್ಯರಾಗಿ ರಾಜ್ಯದಲ್ಲಿ ಬದಲಾವಣೆ ತನ್ನಿ, ಎಲ್ಲಾ ವರ್ಗದ ಜನರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಮೂಲಕ ಶುದ್ಧ ಸರ್ಕಾರವನ್ನು ರಾಜ್ಯದಲ್ಲಿ ತರುವ ಜೊತೆಗೆ ಜನಪರ ಸರ್ಕಾರ ರಚಿಸಲು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಬಲ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಾಸಕ ವಿ.ಮುನಿಯಪ್ಪ, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಮಾಲೂರಿನ ಮಾಜಿ ಶಾಸಕ ಎ.ನಾಗರಾಜು, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಲಪಾಡ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ, ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್‌ಕುಮಾರ್ ಹಾಜರಿದ್ದರು.
ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಲಿ
ಗೃಹ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಚಾರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಗೃಹ ಸಚಿವ ಅರಗ ಜ್ಞಾನೇಂದ್ರ ಕೂಡಲೇ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಬೇಕು. ಹೋಟಲ್ ಗಳಲ್ಲಿ ಆಹಾರ ಪದಾರ್ಥಗಳ ಧರ ಹೇಗೆ ನಿಗಧಿಯಾಗಿರುತ್ತದೆ. ಅದೇ ರೀತಿಯಲ್ಲಿ ಗೃಹ ಇಲಾಖೆಯ ಪಿಎಸ್‌ಐ ಗೆ ಇಷ್ಟು ಸಿಪಿಐ., ಎಸಿಪಿ. ಡಿಸಿಪಿ ಗೆ. ವರ್ಷಕ್ಕೆ ಇಂತಿಷ್ಟು ರೇಟ್ ಅಂತ ಮಾಧ್ಯಮಗಳ ವರದಿಗಳಿಂದ ಬಹಿರಂಗವಾಗಿದೆ. ಈ ವಿಚಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಷಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ತಮ್ಮ ನಿಲುವು ಸ್ಪಷ್ಟಪಡಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದರು.
ಮಾಜಿ ಮುಖ್ಯಮಂತ್ರಿ ಎಚ್‌ಡಿಕೆ ಗೆ ಟಾಂಗ್
ಮೇಕೆದಾಟು ಪಾದಯಾತ್ರೆಯ ಮೂಲಕ ಕಾಂಗ್ರೆಸ್‌ನವರು ಭಾರಿ ಭೋಜನ ಸವೆದಿದ್ದು ಬಿಟ್ಟರೆ ಬೇರೇನೂ ಪ್ರಯೋಜನವಿಲ್ಲ, 1 ಸಾವಿರ ಕೋಟಿಯಿಂದ ಯೋಜನೆ ಮಾಡೋಕ್ಕಾಗುತ್ತಾ ಎಂದು ಚನ್ನಪಟ್ಟಣದಲ್ಲಿ ಪ್ರಶ್ನೆ ಮಾಡಿದ ಮಾಜಿ ಮುಖ್ಯಮಂತ್ರಿ ಎಚ್ಡಿಕೆ ಮಾತಿಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಮೇಕೆದಾಟು ವಿನಿಂದ ಉಪಯೋಗವಿಲ್ಲ ಎನ್ನುವ ಅವರು ಮತ್ಯಾಕೆ ನಮ್ಮ ಕಾರ್ಯಕ್ರಮವನ್ನು ಹೈಜಾಕ್ ಮಾಡಿದರು ಅಂತ ಹೇಳಿದ್ರಲ್ಲಾ, ಯಾಕೆ ಅಂತ ಹೇಳಲಿ, ಈಗ ಅವರು ಅದೇನೋ ಜಲಧಾರೆ ಮಾಡಲು ಹೊರಟಿದ್ದಾರಲ್ಲ, ದಯವಿಟ್ಟು ಅದನ್ನಾದರು ಮಾಡಿ ಜನತೆಗೆ ಜಲಧಾರೆ ಹರಿಸಲಿ, ಜಲಧಾರೆಗೆ ನಾವು ಸಹ ಸಂಪೂರ್ಣ ಬೆಂಬಲ ಕೊಡುತ್ತೇವೆ ಎಂದರು.
ಮೇಕೆದಾಟು ಯೋಜನೆಯಿಂದ ನೀರು ಹರಿಯಲ್ಲ ಎಂದಿದ್ದ ಸಿಎಂ
ಮೇಕೆದಾಟು ಯೋಜನೆಯಿಂದ ನೀರು ಹರಿಯಲ್ಲ ಎಂದಿದ್ದ ಸಿಎಂ ಬಜೆಟ್‌ನಲ್ಲಿ ಮೇಕೆದಾಟು ಯೋಜನೆಗೆ ಸಾವಿರ ಕೋಟಿ ಇಟ್ಟಿದ್ದು ಯಾಕೆ? ಯೋಜನೆಗೆ ಸಂಬಂದಿಸಿದಂತೆ ಕೇಂದ್ರ ಜಲಸಂಪನ್ಮೂಲ ಸಚಿವ ಶೇಖಾವತ್ ಮುಂದೆ ತಾವು ಮೇಕೆದಾಟು ಯೋಜನೆ ನಮ್ಮ ನೀರು ನಮ್ಮ ಹಕ್ಕು ಎಂದು ಹೇಳುವ ಮೂಲಕ ಬದ್ದತೆ ಪ್ರದರ್ಶಿಸಬೇಕಿತ್ತು. ಕೇಂದ್ರ ಜಲಸಂಪನ್ಮೂಲ ಸಚಿವರ ಮುಂದೆ ಬದ್ದತೆ ತೋರದಿರುವುದೇ ನಿಮ್ಮ ವೈಫಲ್ಯಕ್ಕೆ ಕಾರಣ. ಬಜೆಟ್‌ನಲ್ಲಿ ಸಾವಿರ ಕೋಟಿ ಇಟ್ಟಿದ್ದೀರಲ್ಲಾ ಶೀಘ್ರ ಕೆಲಸ ಪ್ರಾರಂಭಿಸಿ ಎಂದು ಆಗ್ರಹಿಸಿದರು.