Sidlaghatta : “ಸಾಮೂಹಿಕ ಆಸ್ತಿಗಳ ಸಂರಕ್ಷಣೆ ಮಾತ್ರ ಸಮೃದ್ಧ ಜೀವನಕ್ಕೆ ದಾರಿ ಮಾಡುತ್ತದೆ,” ಎಂದು ಪರಿಸರ ಭದ್ರತಾ ಪ್ರತಿಷ್ಠಾನ ಸಂಸ್ಥೆಯ ಜಿಲ್ಲಾ ಮುಖ್ಯಸ್ಥ ಶ್ರೀರಂಗ ಹೆಗಡೆ ಹೇಳಿದರು.
ಬೆಳ್ಳೂಟಿ ಗೇಟ್ ಬಳಿಯ ಎಸ್.ಎಲ್.ವಿ. ಕಲ್ಯಾಣ ಮಂಟಪದಲ್ಲಿ ನಡೆದ “ಸಾಮೂಹಿಕ ಆಸ್ತಿಗಳ ಸಮುದಾಯ ಉಸ್ತುವಾರಿ ಸಮ್ಮೇಳನ”ದಲ್ಲಿ ಅವರು ಮಾತನಾಡಿದರು.
ಡಿಸೆಂಬರ್ 4ರಿಂದ 10ರವರೆಗೆ ಜರಗುತ್ತಿರುವ ‘ವಿಶ್ವ ಸಾಮೂಹಿಕ ಆಸ್ತಿಗಳ ಸಪ್ತಾಹದ’ ಅಂಗವಾಗಿ, ಗ್ರಾಮೀಣ ಪ್ರದೇಶಗಳಲ್ಲಿ ಗೋಮಾಳ, ಕೆರೆ, ಗುಂಡುತೋಪು, ಕುಂಟೆ, ರಾಜಕಾಲುವೆ, ಅರಣ್ಯ ಮತ್ತು ಸ್ಮಶಾನ ಮುಂತಾದ ಸಾಮೂಹಿಕ ಆಸ್ತಿಗಳನ್ನು ಸಂರಕ್ಷಣೆ, ಅಭಿವೃದ್ಧಿ ಮತ್ತು ನಿರ್ವಹಣೆ ಕುರಿತಾಗಿ ಜನರಿಗೆ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಅವರು ವಿವರಿಸಿದರು.
ಸಾಮೂಹಿಕ ಆಸ್ತಿಗಳ ಉಳಿವಿಗಾಗಿ ಗ್ರಾಮ ಪರಿಸರ ಅಭಿವೃದ್ಧಿ ಸಮಿತಿಗಳು ರಚನೆಯಾಗಿದ್ದು, ಈ ಆಸ್ತಿಗಳನ್ನು ಗ್ರಾಮ ಪಂಚಾಯಿತಿಯ ಆಸ್ತಿ ವಹಿಯಲ್ಲಿ ನಮೂದಿಸಿ, ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಮುಖ್ಯ ಜವಾಬ್ದಾರಿಗಳನ್ನು ಗ್ರಾಪಂಗೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಹಿರಿಯ ಮುಖಂಡ ಕೆ.ಎಂ. ವೆಂಕಟೇಶ್ ಅವರನ್ನು ಸಾಮೂಹಿಕ ಆಸ್ತಿಗಳನ್ನು ರಕ್ಷಿಸುವ ಹೋರಾಟ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ನೀಡಿರುವ ಮಾರ್ಗದರ್ಶನಕ್ಕೆ ಗೌರವಿಸಲಾಯಿತು.
ಬೆಳ್ಳೂಟಿ ಶಾಲಾ ವಿದ್ಯಾರ್ಥಿಗಳು ಪರಿಸರ ಗೀತೆ ಮತ್ತು ನೃತ್ಯ ಪ್ರದರ್ಶಿಸಿದರು. ಆನೂರು ಗ್ರಾಮ ಪಂಚಾಯಿತಿ ಸದಸ್ಯೆ ವರಲಕ್ಷ್ಮಿ ಸಂತೋಷ್ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಮತ್ತು ಕಲಿಕಾ ಪರಿಕರಗಳನ್ನು ವಿತರಿಸಿದರು.
ಈ ಕಾರ್ಯಕ್ರಮದಲ್ಲಿ ಕುಂದಲಗುರ್ಕಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಾವತಿ, ಮಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ, ಜನಪರ ಪೌಂಡೇಶನ್ ಮುಖ್ಯಸ್ಥ ಶಶಿರಾಜ್ ಹರತಲೆ, ಕಲಾವಿದ ಜಿ. ಮುನಿರೆಡ್ಡಿ, ಎಫ್.ಇ.ಎಸ್. ಸಂಸ್ಥೆಯ ನಿಖತ್ ಪರ್ವೀಣ್, ಮತ್ತು ಸಿ.ಎಸ್.ಎ. ಸಂಸ್ಥೆಯ ಬೂದಾಳ ರಾಮಾಂಜಿನಪ್ಪ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.