Sidlaghatta : ಶಿಡ್ಲಘಟ್ಟ ನಗರಸಭೆ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಸದೆ ಬಿಲ್ ಮಾಡಿಕೊಳ್ಳಲಾಗಿದೆ ಎಂದು ದೂರು ಸಲ್ಲಿಸಲಾಗಿದ್ದು, ಅದರಂತೆ ರಾಜ್ಯ ಪೌರಾಡಳಿತ ನಿರ್ದೇಶನಾಲಯ, ಜಿಲಾಧಿಕಾರಿಗಳ ಕಚೇರಿಯಿಂದ ತನಿಖೆಗಾಗಿ ವಿಶೇಷ ತಂಡ ನಗರಕ್ಕೆ ಶೀಘ್ರ ಆಗಮಿಸಲಿದೆ ಎಂದು ಉಪಾಧ್ಯಕ್ಷ ಅಪ್ಸರ್‌ಪಾಷ ತಿಳಿಸಿದ್ದಾರೆ.
ಶಿಡ್ಲಘಟ್ಟ ನಗರಸಭೆ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಗರಸಭೆಯಲ್ಲಿ ಕೆಲವೊಂದು ಅವ್ಯವಹಾರ ನಡೆಯುತ್ತಿದೆ, ಯಾವುದೇ ಕಾಮಗಾರಿ ನಡೆಸದೆ ಬಿಲ್ ಮಾಡಿಕೊಂಡಿರುವ ಕುರಿತು ಈಗಾಗಲೇ ರಾಜ್ಯ ಪೌರಾಡಳಿತ ನಿರ್ದೇಶನಾಲಯ, ಜಿಲ್ಲಾಧಿಕಾರಿಗಳ ಕಚೇರಿಗೆ ದೂರು ಸಲ್ಲಿಸಿದ್ದೇವೆ. ಅದನ್ನು ಪರಿಗಣಿಸಿದ ಅಧಿಕಾರಿಗಳು ಅತಿ ಶೀಘ್ರದಲ್ಲಿ ತನಿಖೆಗಾಗಿ ನಗರಕ್ಕೆ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ನಗರಸಭೆಯ ಉಪಾಧ್ಯಕ್ಷನಾದ ನನ್ನ ಗಮನಕ್ಕೆ ಬಾರದಂತೆ ಶಿಡ್ಲಘಟ್ಟ ನಗರದ ದಿಬ್ಬೂರಹಳ್ಳಿ ರಸ್ತೆಯ ಮಾರ್ಗದಲ್ಲಿರುವ ಐಡಿಎಸ್‌ಎಂಟಿ ಯೋಜನೆಯಡಿ ನಿರ್ಮಿಸಿರುವ ೫೧ ಅಂಗಡಿ ಮಳಿಗೆ ಸೇರಿದಂತೆ ದರ್ಗಾಮೊಹಲ್ಲಾದ ಬಳಿಯಿರುವ ೨೦. ಬಸ್ ನಿಲ್ದಾಣದ ಬಳಿಯಿರುವ ೦೯, ಸಲ್ಲಾಪುರಮ್ಮ ದೇವಾಲಯದ ಬಳಿಯ ೦೫ ಹಾಗು ಅಶೋಕ ರಸ್ತೆಯ ದ್ವಿಮುಖ ಗಣಪತಿ ದೇವಾಲಯದ ಬಳಿಯಿರುವ ೦೪ ಅಂಗಡಿ ಒಳಗೊಂಡಂತೆ ಒಟ್ಟು ೯೨ ಅಂಗಡಿ ಮಾಳಿಗೆಗಳನ್ನು ಪುನಃ ಬಾಡಿಗೆಗೆ ನೀಡುವ ಸಲುವಾಗಿ ಟೆಂಡರ್ ಕರೆದು ನಗರಸಭೆಯಿಂದ ಹೊರಡಿಸಿರುವ ಕರಪತ್ರದಲ್ಲಿ ನಾನು ಸಹಿ ಮಾಡಿದಂತೆ ಮುದ್ರಣ ಮಾಡಲಾಗಿದೆ. ಟೆಂಡರಗೆ ಸಂಬಂಧಿಸಿದಂತೆ ನನಗೆ ಯಾವುದೇ ರೀತಿಯ ಮಾಹಿತಿ ಇಲ್ಲ, ಆದರೂ ನನ್ನ ಅನುಮತಿಯಿಲ್ಲದೆ ಕರಪತ್ರದಲ್ಲಿ ನಾನು ಸಹಿ ಮಾಡಿದ್ದೇನೆ ಎಂದು ಮುದ್ರಣ ಮಾಡಿರುವುದು ಸರಿಯಲ್ಲ ಎಂದರು.
ನಗರಸಭಾ ಸದಸ್ಯ ಎನ್.ಕೃಷ್ಣಮೂರ್ತಿ ಮಾತನಾಡಿ ವಾಣಿಜ್ಯ ಮಳಿಗೆಗಳ ವಿಲೇವಾರಿ ಮಾಡಲು ಸುತ್ತೋಲೆಗೆ ಸಂಬಂದಿಸಿದಂತೆ ಪರಿಶಿಷ್ಠ ಜಾತಿ ಹಾಗು ಪರಿಶಿಷ್ಟ ಪಂಗಡ ಸಮುದಾಯಕ್ಕೆ ಶೇ ೧೮ ರಷ್ಟು ಮೀಸಲಾತಿ ನಿಗಧಿ ಮಾಡಲಾಗಿದೆಯಾದರೂ ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ಐಡಿಎಸ್‌ಎಂಟಿ ಯೋಜನೆಯಡಿ ನಿರ್ಮಿಸಿರುವ ೫೧ ಅಂಗಡಿಗಳ ಪೈಕಿ ೧೫ ಅಂಗಡಿಗಳ ಮೀಸಲಿರಿಸಿದ್ದು ತಮಗಿಷ್ಟ ಬಂದಂತಹ ಅಂಗಡಿಗಳನ್ನು ಎಸ್‌ಸಿ, ಎಸ್‌ಟಿ ಸಮುದಾಯದವರೆಗೆ ಸೂಚಿಸಿರುವುದು ಸರಿಯಲ್ಲ, ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲಿ ಪಾಲಿಸಬೇಕಾದ ಮೀಸಲಾತಿಯ ಬಗ್ಗೆ ಮತ್ತೊಮ್ಮೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಆ ನಂತರ ಹರಾಜು ಪ್ರಕ್ರಿಯೆ ನಡೆಸಿದರೆ ಉತ್ತಮ. ಹರಾಜು ಮೂಲಕ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಪಾಲಿಸಬೇಕಾದ ನಿಯಮಗಳನ್ನು ಗಾಳಿಗೆ ತೂರುವ ಮೂಲಕ ತಮಗಿಷ್ಟ ಬಂದಂತೆ ಅಂಗಡಿ ಮಳಗೆಗಳ ಮರು ಹರಾಜಿಗೆ ತರಾತುರಿಯಲ್ಲಿ ಮುಂದಾದರೆ ಮುಂದೆ ಆಗುವ ಅನಾಹುತಗಳಿಗೆ ಅಧಿಕಾರಿಗಳೇ ಕಾರಣವಾಗುತ್ತಾರೆ ಎಂದರು.