ನಗರಸಭೆ ಅಧ್ಯಕ್ಷೆ ಸುಮಿತ್ರ ರಮೇಶ್ ಅಧ್ಯಕ್ಷತೆಯಲ್ಲಿ ನಗರಸಭೆ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ನಗರಸಭೆ ಆಯುಕ್ತ ಆರ್.ಶ್ರೀಕಾಂತ್ ಮಾತನಾಡಿದರು.
ನಗರ ವ್ಯಾಪ್ತಿಯಲ್ಲಿನ ಸರ್ಕಾರಿ ಜಾಗದಲ್ಲಿ 20*30 ಅಡಿ ಅಳತೆಯಲ್ಲಿ ಕಟ್ಟಿದ ಅಕ್ರಮ ಮನೆಗಳನ್ನು ಸಕ್ರಮ ಮಾಡಲು ಸರ್ಕಾರ ನಿರ್ಧರಿಸಿದ್ದು, ಅರ್ಹರು ಆನ್‌ಲೈನ್‌ನಲ್ಲಿ ಅರ್ಜಿಯನ್ನು ಹಾಕಿಕೊಳ್ಳಬಹುದು. ತಹಶೀಲ್ದಾರರು ಸಕ್ರಮ ಖಾತೆ ನೀಡಲಿದ್ದು ನಗರಭೆಯಿಂದ ವ್ಯಾಪಕ ಪ್ರಚಾರ ನೀಡುವ ಕೆಲಸವನ್ನಷ್ಟೆ ಮಾಡಬೇಕಿದೆ ಎಂದು ಹೇಳಿದರು.
ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆಗೇರಿದ ಇಲ್ಲಿ ನಗರಸಭೆ ಅಧ್ಯಕ್ಷರು, ಆಯುಕ್ತರು, ಆರೋಗ್ಯ ಅಭಿಯಂತರರು ಹಾಗೂ ಅಭಿಯಂತರರಿಗೆ ಸರ್ಕಾರಿ ವಾಹನ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಬ್ಯಾಂಕ್‌ನಿಂದ ಸಾಲ, ಎಲ್‌ಐಸಿ ಸಾಲ ಅಥವಾ ಸ್ಥಳೀಯ ಸಂಪನ್ಮೂಲದಲ್ಲಿ ವಾಹನಗಳನ್ನು ಖರೀದಿಸಬಹುದು. ಅದುವರೆಗೂ ಗುತ್ತಿಗೆ ಆಧಾರದಲ್ಲಿ ಎರಡು ವಾಹನಗಳನ್ನು ಪಡೆದುಕೊಳ್ಳಲು ಅವರು ಮಾಡಿದ ಮನವಿಗೆ ಸಭೆಯಲ್ಲಿ ವಾಹನ ಖರೀದಿಗೆ ಅನುಮತಿ ನೀಡಲಾಯಿತು.
ಹಿತ್ತಲಹಳ್ಳಿಯ ಬಳಿ ಇರುವ ತ್ಯಾಜ್ಯ ಘಟಕದಲ್ಲಿ ಈ ಹಿಂದೆ ಅಳವಡಿಸಿದ 45 ಲಕ್ಷ ರೂ ವೆಚ್ಚದ ಯಂತ್ರಗಳು ಇದುವರೆಗೂ ಕೆಲಸ ಆರಂಭಿಸಿಲ್ಲ, ಅವು ಕಳಪೆಯಾಗಿವೆ ಎಂದು ಸದಸ್ಯ ರಾಘವೇಂದ್ರ ಆಕ್ಷೇಪಿಸಿದ್ದಕ್ಕೆ ಅದರ ಬಗ್ಗೆ ತನಿಖೆಗೆ ಸಭೆಯಲ್ಲಿ ನಿರ್ಧರಿಸಲಾಯಿತು.
ಜತೆಗೆ ನಗರಸಭೆಯ ವ್ಯಾಪ್ತಿಯಲ್ಲಿದ್ದರೂ ಕೆಲವೊಂದು ನಿವೇಶನಗಳು ಹಂಡಿಗನಾಳ ಗ್ರಾಮಪಂಚಾಯಿತಿಯಲ್ಲಿ ಖಾತೆಗಳು ಇವೆ. 5 ಸಾವಿರಕ್ಕೂ ಹೆಚ್ಚು ಇಂತಹ ಅಕ್ರಮ ಖಾತೆಗಳು ಇವೆ. ಅವುಗಳ ಬಗ್ಗೆ ಸಂಪೂರ್ಣ ತನಿಖೆ ನಡೆಸುವ ಬಗ್ಗೆ ಪೌರಾಯುಕ್ತರ ಪ್ರಸ್ತಾಪಕ್ಕೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ನೇರ ಪಾವತಿ ಹಾಗೂ ಕ್ಷೇಮಾಭಿವೃದ್ದಿಯಡಿ ನೇಮಕಗೊಂಡಿರುವ ಪೌರ ಕಾರ್ಮಿಕರು ನಿವೃತ್ತಿಯಾದಾಗ ಅಥವಾ ನಿಧನವಾದಾಗ ಪರಿಹಾರ ನೀಡಲು ಕಾನೂನಿನಲ್ಲಿ ಅವಕಾಶವಿದ್ದು, ಕೋಲಾರ ಇನ್ನಿತರೆ ಕಡೆ 5 ಲಕ್ಷ ರೂ.ನೀಡುವ ಪ್ರಸ್ತಾಪವನ್ನು ಮುಂದಿಟ್ಟಾಗ ಆರ್ಥಿಕ ಶಕ್ತಿಗೆ ಅನುಗುಣವಾಗಿ ಪರಿಹಾರ ನೀಡಲು ಸಭೆಯಲ್ಲಿ ಒಮ್ಮತಕ್ಕೆ ಬರಲಾಯಿತು.
ನಗರದಲ್ಲಿನ ಮೇಲುಸ್ತರ ಟ್ಯಾಂಕ್‌ಗಳ ಬದಲಿಗೆ ಎರಡು ಮೂರು ವಾರ್ಡುಗಳಿಗೆ ಒಂದರಂತೆ ನೆಲಮಟ್ಟದ ಟ್ಯಾಂಕುಗಳನ್ನು ನಿರ್ಮಿಸಿ ಕುಡಿಯುವ ನೀರು ಪೂರೈಕೆ ಮಾಡುವುದರಿಂದ ನೀರು ಪೋಲಾಗುವುದನ್ನು ತಪ್ಪಿಸಬಹುದು. ಹಾಗಾಗಿ ಅಗತ್ಯಕ್ಕೆ ತಕ್ಕಂತೆ ನೆಲ ಮಟ್ಟದ ಟ್ಯಾಂಕುಗಳನ್ನು ನಿರ್ಮಿಸಲು ತೀರ್ಮಾನಿಸಲಾಯಿತು.
ನಗರಸಭೆ ಸದಸ್ಯರಾದ ವೆಂಕಟಸ್ವಾಮಿ, ಸುರೇಶ್, ಸುಗುಣಲಕ್ಷ್ಮೀನಾರಾಯಣ್ ಇನ್ನಿತರೆ ಸದಸ್ಯರು, ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.