Sidlaghatta : ಶಿಡ್ಲಘಟ್ಟದ ನಗರಸಭೆಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ 2023-24 ನೇ ಸಾಲಿನ ಅಂದಾಜು ಆಯ-ವ್ಯಯದ ಬಜೆಟ್ ಮಂಡನೆ ಮಾಡಲಾಯಿತು.
ನಗರಸಭೆ ಅಧ್ಯಕ್ಷೆ ಸುಮಿತ್ರರಮೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, 23,85,91,500 ರೂಗಳ ಆದಾಯ ನಿರೀಕ್ಷೆಯ, 23,32,88,047 ಅಂದಾಜು ಖರ್ಚಿನೊಂದಿಗೆ 53,03,453 ರೂ ಉಳಿತಾಯ ಬಜೆಟ್‌ನ್ನು ಮಂಡಿಸಲಾಯಿತು.
ಬಜೆಟ್ ಮಂಡನೆ ಸಭೆಯಲ್ಲಿ ಅಧ್ಯಕ್ಷೆ ಸುಮಿತ್ರರಮೇಶ್ ಅವರು ಬಜೆಟ್‌ನ್ನು ಮಂಡಿಸಿದರು. ಹೆಚ್ಚೇನು ಚರ್ಚೆ ನಡೆಸದೆ ಕೇವಲ ಅರ್ಧ ಗಂಟೆ ಸಮಯದಲ್ಲೆ ಬಜೆಟ್ ಮಂಡನೆ ಸಭೆ ಮುಗಿಯಿತು.
ಆಸ್ತಿ ತೆರಿಗೆಯಿಂದ ಅತಿ ಹೆಚ್ಚು 2.8 ಕೋಟಿ ರೂ.ಆದಾಯವನ್ನು ನಿರೀಕ್ಷಿಸಿದ್ದು ಇನ್ನುಳಿದಂತೆ ನೀರಿನ ತೆರಿಗೆಯಿಂದ 50 ಲಕ್ಷ, ನಗರಸಭೆಯ ವಾಣಿಜ್ಯ ಮಳಿಗೆ, ಐಡಿಎಸ್‌ಎಂಟಿ ಮಳಿಗೆಗಳ ಬಾಡಿಗೆಗಳಿಂದ 25 ಲಕ್ಷ ಹಾಗೂ ಇತರೆ ಅಭಿವೃದ್ದಿ ಶುಲ್ಕದ ಮೂಲಕ 40 ಲಕ್ಷ ಆದಾಯವನ್ನು ನಿರೀಕ್ಷೆ ಮಾಡಲಾಗಿದೆ.
ಉದ್ದಿಮೆ ಪರವಾನಿಗೆಗೆ ವಿಧಿಸುವ ಶುಲ್ಕದ ಮೂಲಕ 25 ಲಕ್ಷ ರೂ, ಖಾತೆ ಪ್ರತಿ ಖಾತೆ ಬದಲಾವಣೆ ಶುಲ್ಕದ ಬಾಬ್ತು 50 ಲಕ್ಷ ರೂ, ಅನುಪಯುಕ್ತ ಮತ್ತು ದಾಸ್ತಾನು ಮಾರಾಟ ಬಾಬ್ತು 5 ಲಕ್ಷ ರೂ, ನೀರು ಸರಬರಾಜು ಮತ್ತು ಒಳ ಚರಂಡಿ ಸಂಪರ್ಕ ಬಾಬ್ತು ಶುಲ್ಕದ ರೂಪದಲ್ಲಿ 5 ಲಕ್ಷ ರೂ ಆದಾಯ ಬರುವ ನಿರೀಕ್ಷೆ ಮಾಡಲಾಗಿದೆ.
ಜತೆಗೆ ಸರ್ಕಾರದ ಎಸ್‌ಎಫ್‌ಸಿಎಸ್ ವಿಶೇಷ ಅನುದಾನದಡಿ 4 ಕೋಟಿ ರೂ, 15 ನೇ ಹಣಕಾಸು ಯೋಜನೆಯಡಿ 1 ಕೋಟಿ 91 ಲಕ್ಷ, ಡಲ್ಟ್ ಅನುಧಾನ 3 ಕೋಟಿ, ಎಸ್ ಡಬ್ಲ್ಯೂ ಎಂ ಅನುದಾನ 2 ಕೋಟಿ ಸರ್ಕಾರದಿಂದ ಅನುದಾನದ ರೂಪದಲ್ಲಿ ಆದಾಯ ಬರುವ ನಿರೀಕ್ಷೆ ಮಾಡಲಾಗಿದೆ.
ಇನ್ನು ಪ್ರಸಕ್ತ ವರ್ಷದಲ್ಲಿ ನಗರದ ಎಲ್ಲಾ ವಾರ್ಡುಗಳಿಗೆ ಕುಡಿಯುವ ನೀರು, ಉತ್ತಮ ಆರೋಗ್ಯ, ಸ್ವಚ್ಚ ನಗರ, ಬೀದಿ ದ್ವೀಪ, ರಸ್ತೆ, ಚರಂಡಿ, ಉದ್ಯಾನವನಗಳ ಅಭಿವೃದ್ದಿಗೆ ಆಯ ವ್ಯಯದಲ್ಲಿ ಆಧ್ಯತೆ ನೀಡಲಾಗಿದ್ದು ನಗರಸಭೆಗೆ ಸೇರಿದ ಹಿತ್ತಲಹಳ್ಳಿ ಬಳಿಯಿರುವ ಕಸ ವಿಲೇವಾರಿ ಗಟಕದಲ್ಲಿ ಸುಮಾರು 26 ಸಾವಿರ ಮೆಟ್ರಿಕ್ ಟನ್ದ ಪಾರಂಪರಿಕ ತ್ಯಾಜ್ಯವಿರುವುದನ್ನು ಸಮೀಕ್ಷೆ ಮೂಲಕ ಗುರುತಿಸಿದ್ದು ಇದರ ವಿಲೇವಾರಿಗಾಗಿ ಸರ್ಕಾರದಿಂದ 1.98 ಲಕ್ಷ ಅನುದಾನ ಬಿಡುಗಡೆ ಮಾಡಲು ಕೋರಿ ಯೋಜನಾ ವರದಿ ಸಿದ್ದಪಡಿಸಿ ಸಲ್ಲಿಸಲಾಗಿದೆ. ಬೀದಿ ಬದಿ ವ್ಯಾಪಾರಸ್ಥರ ಕಲ್ಯಾಣಕ್ಕಾಗಿ 10 ಲಕ್ಷ, ಪ್ರಕೃತಿ ವಿಕೋಪದಿಂದ ಮೃತರಾದವರ ಪರಿಹಾರಕ್ಕಾಗಿ 10 ಲಕ್ಷ, ಮೀಸಲಿಡಲಾಗಿದೆ.
ವರ್ಗವಾರು ಗಮನಿಸುವುದಾದರೆ ಪರಿಶಿಷ್ಟ ಜಾತಿ ಹಾಗು ಪಂಗಡಗಳ ಅಭಿವೃದ್ದಿ ನಿಧಿ (ಶೇ 24.10 %) 23 ಲಕ್ಷ, ಕಲ್ಯಾಣನಿಧಿ (ಶೇ 7.25) 7 ಲಕ್ಷ ರೂ, ಕಲ್ಯಾಣ ನಿಧಿ (ಶೇ 5%) 5 ಲಕ್ಷ ರೂಗಳನ್ನು ಮೀಸಲು ಇಡಲಾಗಿದೆ.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಆರ್.ಶ್ರೀಕಾಂತ್, ವ್ಯವಸ್ಥಾಪಕ ವೆಂಕಟೆಶ್, ಸದಸ್ಯರಾದ ಸುಗುಣ ಲಕ್ಷ್ಮಿನಾರಾಯಣ, ಎಸ್.ರಾಘವೇಂದ್ರ, ಸುರೇಶ್, ಪದ್ಮಿನಿ ಕಿಶನ್, ರೂಪ, ಆರ್.ವಸಂತ, ಹಾಜರಿದ್ದರು.
ಬಹುತೇಕ ಸದಸ್ಯರ ಗೈರು :
ನಗರಸಭೆಯಲ್ಲಿ ಒಟ್ಟು 31 ಚುನಾಯಿತಿ ಸದಸ್ಯರಿದ್ದು ಈ ಪೈಕಿ ಕೇವಲ 11 ಜನ ಸದಸ್ಯರು ಮಾತ್ರ ಬಜೆಟ್ ಸಭೆಯಲ್ಲಿ ಹಾಜರಿದ್ದರು. ಉಳಿದ 20 ಸದಸ್ಯರು ಶುಕ್ರವಾರ ನಡೆದ ಬಜೆಟ್ ಸಭೆಗೆ ಗೈರಾಗಿದ್ದರು. ಮೂರನೆ ಒಂದರಷ್ಟು ಅಂದರೆ 11 ಸದಸ್ಯರ ಸಂಖ್ಯಾ ಬಲದ ಆಧಾರದ ಮೇಲೆ ಬಜೆಟ್ ಸಭೆ ನಡೆಸಿ ಅನುಮೋದಿಸಲಾಯಿತು.
ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಗೆ ವಿಘ್ನ
ಶುಕ್ರವಾರ ಬೆಳಗ್ಗೆ 10.15 ಕ್ಕೆ ನಗರಸಭೆ ಅಧ್ಯಕ್ಷೆ ಸುಮಿತ್ರ ರಮೆಶ್ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಬಜೆಟ್ ಸಭೆಗೆ ಗೈರು ಹಾಜರಾಗಿದ್ದ (ಕಾಂಗ್ರೆಸ್, ಬಿಎಸ್‌ಪಿ, ಪಕ್ಷೇತರರು ಸೇರಿದಂತೆ ಓರ್ವ ಬಿಜೆಪಿ ಸದಸ್ಯ) 20 ಮಂದಿ ಸದಸ್ಯರು ಮತು ಶಾಸಕ ವಿ.ಮುನಿಯಪ್ಪ ಮದ್ಯಾಹ್ನ 12.15 ಕ್ಕೆ ನಗರಸಭೆ ಅಧ್ಯಕ್ಷೆ ಸುಮಿತ್ರ ರಮೇಶ್ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ವಿಶೇಷ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಬಂದು ಸಭಾಂಗಣದಲ್ಲಿ ಕುಳಿತರು. ಆದರೆ, ನಗರಸಭೆ ಅಧ್ಯಕ್ಷೆ ಸಮಿತ್ರರಮೇಶ್ ತಮ್ಮ ಅಧ್ಯಕ್ಷರ ಅಧಿಕಾರ ಬಳಸಿ ಸಭೆಯನ್ನು ಮುಂದೂಡುವಂತೆ ಅಧಿಕಾರಿಗಳಿಗೆ ಆದೇಶ ರವಾನಿಸಿರುವ ಬಗ್ಗೆ ಪೌರಾಯುಕ್ತ ಆರ್.ಶ್ರೀಕಾಂತ್ ಸಭೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಸದಸ್ಯರ ಗಮನಕ್ಕೆ ತಂದರು.
ಇದರಿಂದ ಕುಪಿತಗೊಂಡ ಸದಸ್ಯರು ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭೆ ನಡೆಸುವಂತೆ ಪಟ್ಟು ಹಿಡಿದಾಗ ಪೌರಾಯುಕ್ತರು ತಮ್ಮ ಮೇಲಾಧಿಕಾರಿಗಳೊಂದಿಗೆ ಸಂಪರ್ಕಿಸಿ ವಿಚಾರ ತಿಳಿಸಿ ಅವರ ಸೂಚನೆಯ ಮೇರೆಗೆ ಅಧ್ಯಕ್ಷರಿಗೆ ಮತ್ತೊಮ್ಮೆ ಪತ್ರದ ಮೂಲಕ ಸಭೆ ನಡೆಸಿಕೊಡುವಂತೆ ಮನವಿ ಮಾಡಿದರಾದರೂ ಸಭೆಗೆ ಹಾಜರಾಗಲು ಅಧ್ಯಕ್ಷರು ಒಪ್ಪದ ಕಾರಣ ಸ್ಥಾಯಿಸಮಿತಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿಲ್ಲ.