Sidlaghatta : ಕ್ರಿಸ್ ಮಸ್ ಹಬ್ಬದ ಆಚರಣೆಗೆ ತಾಲ್ಲೂಕಿನಾದ್ಯಂತ ಭರದ ಸಿದ್ಧತೆ ನಡೆಯುತ್ತಿದ್ದು, ಜೀಸಸ್ ಕ್ರೈಸ್ತನ ಹುಟ್ಟುಹಬ್ಬವನ್ನು ಸಂಭ್ರಮ-ಸಡಗರಗಳಿಂದ ಆಚರಿಸಲು ಜನರು ಕಾತರದಿಂದ ಕಾಯುತ್ತಿದ್ದಾರೆ. ಕ್ರಿಸ್ ಮಸ್ ಹಬ್ಬ ಕೇವಲ ಕ್ರೈಸ್ತ ಧರ್ಮದವರಿಗೆ ಮಾತ್ರವಲ್ಲದೆ ಇಡೀ ಸಮಾಜದ ಬಾಂಧವರು ಆಚರಿಸುವ ಒಂದು ಹಬ್ಬವೆನಿಸಿದೆ. ಜಾತಿ, ಧರ್ಮಗಳನ್ನು ಹೊರತುಪಡಿಸಿ ಸಮಾಜದಲ್ಲಿ ಶಾಂತಿ, ಸಮೃದ್ಧಿ ನೆಲೆಸಲು ಪ್ರಾರ್ಥಿಸುವುದು ಕ್ರಿಸ್ ಮಸ್ ಹಬ್ಬ ಆಚರಣೆಯ ಮುಖ್ಯ ಸಂದೇಶವಾಗಿದೆ.
ನಗರದ ಹಲವು ಕಡೆಗಳಲ್ಲಿ ಅಂಗಡಿಗಳಲ್ಲಿ ಕ್ರಿಸ್ ಮಸ್ ಹಬ್ಬಕ್ಕೆ ಸಂಬಂಧಿಸಿದ ಅಲಂಕಾರಿಕ ವಸ್ತುಗಳ ಮಾರಾಟ ಭರದಿಂದ ನಡೆಯುತ್ತಿದೆ. ಸಂತ ಕ್ಲಾಸ್ ನ ಕಟೌಟ್ ಗಳು, ಕ್ರಿಸ್ ಮಸ್ ಸ್ಟಾರ್ ವಿವಿಧ ಬಣ್ಣ ಮತ್ತು ಆಕಾರಗಳಲ್ಲಿ, ದೀಪಗಳ ವ್ಯಾಪಾರಗಳು ಮಾರುಕಟ್ಟೆಗಳಲ್ಲಿ ಮಾರುತ್ತಿದ್ದಾರೆ. ಬೇಕರಿಗಳಲ್ಲಿ ಈಗಾಗಲೇ ಕೇಕ್ ತಯಾರಿಕೆಗೆ ಸಿದ್ಧತೆ ಪ್ರಾರಂಭವಾಗಿದೆ.

ನಗರದ ಚಿಂತಾಮಣಿ ರಸ್ತೆಯ ಸೇಕ್ರೆಡ್ ಹಾರ್ಟ್ ಚರ್ಚ್, ದಿಬ್ಬೂರಹಳ್ಳಿ ರಸ್ತೆಯ ಎಬೆನೆಜರ್ ಮಾರ್ತೋಮ ಚರ್ಚ್, ನೆಲ್ಲೀಮರದಹಳ್ಳಿಯ ಇಮ್ಮಾನುವೇಲ್ ಕ್ರಿಶ್ಚಿಯನ್ ಚರ್ಚ್ ಹಾಗೂ ತಾಲ್ಲೂಕಿನ ವಿವಿದೆಡೆಗಳಲ್ಲಿರುವ ಚರ್ಚ್ ಗಳನ್ನು ವಿದ್ಯುತ್ ದೀಪಗಳು, ಬಣ್ಣದ ನಕ್ಷತ್ರಗಳು, ಹೂಗಳು, ಬೆಲೂನುಗಳಿಂದ ಸಿಂಗರಿಸಿದ್ದಾರೆ. ಬಣ್ಣ ಬಣ್ಣದ ಅಲಂಕಾರಿಕ ವಸ್ತುಗಳಿಂದ ಕ್ರಿಸ್ಮಸ್ ಟ್ರೀ ಅಲಂಕಾರ ಮಾಡಿದ್ದಾರೆ.

ಪ್ರತಿ ಚರ್ಚ್‌ನ ಅಂಗಳದಲ್ಲಿ, ಏಸು ಜನಿಸಿದ ಗೋದಲಿಯ ಪ್ರತಿಕೃತಿಯನ್ನು ಮಾಡಲಾಗಿದೆ. ಕ್ರಿಬ್ ಅಥವಾ ಗೋದಲಿಯಲ್ಲಿ ಬೆತ್ಲೆಹೆಮ್‌ನ ಬೆಟ್ಟ ಗುಡ್ಡ, ಕಣಿವೆಗಳು, ಜಾರುವ ಝರಿ, ಇಳಿದು ಬರುವ ತೊರೆ, ಗದ್ದೆಗಳ ಹಸಿರಿನ ನಡುವೆ ದೈವಿಕ, ಮಾನವಿಕ ಪ್ರತಿಮೆಗಳು, ಪ್ರಾಣಿ, ಪಕ್ಷಿಗಳ ಮೂರ್ತಿಗಳು ಮರು ಸಷ್ಟಿಪಡೆದಿವೆ. ಜ್ಞಾನಿಗಳು, ಜೋಯಿಸಲು, ಕುರುಬರು, ಯೋಸೇಫ್, ಮರಿಯಾ ಹಾಗೂ ಬಾಲಯೇಸುವಿನ ಮೂರ್ತಿಗಳನ್ನು ಇಟ್ಟು ಅಲಂಕರಿಸಿದ್ದಾರೆ. ಸಿಂಗಾರಗೊಂಡ ಗೋದಲಿಯಲ್ಲಿ ಬಾಲ ಏಸುವಿನ ಮುಖವನ್ನು ಕಾಣುವುದೇ ಒಂದು ಸೊಗಸು.

ಕ್ರೈಸ್ತರ ಮನೆಗಳ ಮೇಲೆ ಕ್ರಿಸ್ತನ ಜನ್ಮದ ಸಂಕೇತವಾಗಿ ನಕ್ಷತ್ರಗಳನ್ನು ಕಟ್ಟಿದ್ದಾರೆ. ಚರ್ಚ್ ಗಳ ಸಭಾಪಾಲಕರು, ಫಾದರ್ ಗಳು, ಕ್ರಿಸ್ತನ ಅನುಯಾಯಿಗಳ ಮನೆಗಳಿಗೆ ತೆರಳಿ ಹಾಡುಗಳ ಮೂಲಕ ಕ್ಯಾರೋಲ್ ಗಳನ್ನು ನಡೆಸಿದ್ದಾರೆ.
ನಗರದ ಇಮ್ಮಾನುವೇಲ್ ಕ್ರಿಶ್ಚಿಯನ್ ಚರ್ಚ್ ನ ಫಾದರ್ ಜೇಮ್ಸ್ ವೆಂಕಟೇಶ್ ಮಾತನಾಡಿ, ಕನ್ಯೆಯಾಗಿದ್ದ ಮರಿಯಾ ದೇವಧೂತನ ವರದಿಂದ ಬೆತ್ಲೆಹೇಮ್ ಪಟ್ಟಣದಲ್ಲಿ ಗೋದಲಿಯಲ್ಲಿ ಯೇಸುಕ್ರಿಸ್ತನಿಗೆ ಜನ್ಮ ನೀಡುತ್ತಾರೆ. ಯೇಸು ಕ್ರಿಸ್ತನು ಜನಿಸಿದಾಗ ಆಕಾಶದಲ್ಲಿ ನಕ್ಷತ್ರವೊಂದು ಉದಯಿಸಿತ್ತು. ಅದನ್ನು ಅನುಸರಿಸಿ ಪೂರ್ವದೇಶದ ಜ್ಞಾನಿಗಳು, ಜೋಯಿಸರು ಬೆತ್ಲೆಹೇಮಿಗೆ ಬಂದು ಈ ದೈವ ಪುರುಷನನ್ನು ಕಂಡರು. ಅದರ ಸಂಕೇತವಾಗಿ ಮನೆಗಳ ಮೇಲೆ ನಕ್ಷತ್ರಗಳನ್ನು ಕಟ್ಟುತ್ತೇವೆ. ನಕ್ಷತ್ರವನ್ನು ಅನುಸರಿಸಿಕೊಂಡು ಬಂದ ಜ್ಞಾನಿಗಳು, ಯೇಸುವನ್ನು ಕಂಡು ಚಿನ್ನ, ಧೂಪ, ಮುಂತಾದವುಗಳನ್ನು ಕಾಣಿಕೆಯಾಗಿ ಸಮರ್ಪಣೆ ಮಾಡಿ, ಸಾಷ್ಟಾಂಗ ನಮಸ್ಕಾರ ಮಾಡುತ್ತಾರೆ. ಈ ಸಂಭ್ರಮವನ್ನು ಕ್ರಿಸ್ ಮಸ್ ಎಂದು ಆಚರಣೆ ಮಾಡುತ್ತೇವೆ. ಯೇಸುವಿನ ಜನನದ ನಂತರ ಅವರನ್ನು ದಾಖಲೆಗಳಲ್ಲಿ ನೋಂದಣಿ ಮಾಡಿದ ದಿನದಿಂದ ಕ್ಯಾಲೆಂಡರ್ ವರ್ಷವು ಕ್ರಿ.ಪೂ ದಿಂದ ಕ್ರಿಸ್ತ ಶಕವಾಗಿ ಜನವರಿ 1 ರಿಂದ ಜಾರಿಗೆ ಬಂದಿದೆ ಎಂದರು.