Sugaturu, Sidlaghatta : ಮಕ್ಕಳಲ್ಲಿ ಅಡಗಿರುವ ಸುಪ್ತ ಕೌಶಲಗಳನ್ನು ಹೊರಹಾಕಿ ಉತ್ತಮ ಜ್ಞಾನ ಪಡೆಯಲು ಬೇಕಾದ ಅವಕಾಶಗಳನ್ನು ಶಾಲೆಗಳು ಒದಗಿಸಬೇಕಿದೆ. ಹಾಗೆಯೆ ಪೋಷಕರು ಮಕ್ಕಳಿಗೆ ಆಸ್ತಿ ಸಂಪಾದಿಸಿ ಇಡುವುದಕ್ಕಿಂತ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಸಮಾಜದ ಆಸ್ತಿಯನ್ನಾಗಿ ಮಕ್ಕಳನ್ನು ಪರಿವರ್ತಿಸಲು ಹೆಚ್ಚು ಒಲವು ಹೊಂದಬೇಕು ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಅಕ್ಷರದಾಸೋಹ ಶಿಕ್ಷಣಾಧಿಕಾರಿ ಆಂಜನೇಯ ತಿಳಿಸಿದರು.
ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಉಚಿತ ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲಾಗುತ್ತಿದೆ. ಉತ್ತಮ ಕಲಿಕಾ ಮತ್ತು ಭೌತಿಕ ಪರಿಸರವನ್ನು ಸೃಷ್ಟಿಸಲು ಸಾಕಷ್ಟು ಪ್ರಯತ್ನ ನಡೆದಿದ್ದು ಮಕ್ಕಳ ಶಿಕ್ಷಣಕ್ಕೆ ಅಗತ್ಯವಾದ ಸಾಕಷ್ಟು ಸೌಲಭ್ಯಗಳನ್ನು ಸರ್ಕಾರವು ವಿವಿಧ ಯೋಜನೆಗಳ ಮೂಲಕ ಒದಗಿಸಲಾಗುತ್ತಿದೆ ಎಂದರು.
ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಪೂರಕವಾಗಿ ಕ್ಷೀರಭಾಗ್ಯ, ಮೊಟ್ಟೆ, ಬಾಳೆಹಣ್ಣು, ಬಿಸಿಯೂಟದಂತಹ ಯೋಜನೆಗಳು ಸಹಕಾರಿಯಾಗಿವೆ. ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಿದ್ದು ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸುವಂತಾಗಬೆಕು ಎಂದರು.
ಶೈಕ್ಷಣಿಕ ವರ್ಷ ಪ್ರಾರಂಭೋತ್ಸವದ ಅಂಗವಾಗಿ ವಿದ್ಯಾರ್ಥಿಗಳನ್ನು ಗುಲಾಭಿ, ಸಿಹಿ ನೀಡಿ ಸ್ವಾಗತಿಸಲಾಯಿತು. ಇಲಾಖೆಯಿಂದ ಉಚಿತ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು. ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಅವರು ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ಪುಸ್ತಕ, ಪೆನ್ಸಿಲ್ ಬಾಕ್ಸ್ಗಳನ್ನು ವಿತರಿಸಿದರು.
ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶ್, ಸದಸ್ಯ ನಾಗೇಶ್, ನಾಗರಾಜು, ಗ್ರಾಮಪಂಚಾಯಿತಿ ಸದಸ್ಯ ಶಿವಶಂಕರಪ್ಪ, ಎಂ.ದೇವರಾಜು, ಬಚ್ಚೇಗೌಡ, ಎನ್.ಪಿ.ನಾಗರಾಜಪ್ಪ, ಆಂಜಿನಪ್ಪ, ಆರತಿ, ಶಿಕ್ಷಕ ಎ.ಬಿ.ನಾಗರಾಜ, ಮಧು, ಬಿ.ನಾಗರಾಜು, ಶಿಕ್ಷಕಿ ತಾಜೂನ್, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.