Sidlaghatta : ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲಾ ಮಕ್ಕಳು ವಿದ್ಯಾವಂತರಾಗಬೇಕು. ಈ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆಯ ಮೂಲಕ ವ್ಯಾಪಕವಾಗಿ ಅರಿವು ಮತ್ತು ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಬಾಲಕಾರ್ಮಿಕರ ಮುಕ್ತ ವಾತಾವರಣ ಮಾಡುವುದೇ ನಮ್ಮ ಮುಖ್ಯಗುರಿ ಎಂದು ಕಾರ್ಮಿಕ ಇಲಾಖೆಯ ಜಿಲ್ಲಾ ಅಧಿಕಾರಿ ಶಬನಾ ಆಜ್ಮಿ ತಿಳಿಸಿದರು.
ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಕಾರ್ಮಿಕ ಇಲಾಖೆ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಬಚ್ಪನ್ ಬಚಾವ್ ಆಂದೋಲನ್, ಶಾಂತಾ ಟ್ರಸ್ಡ್ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಬಾಲಕಾರ್ಮಿಕರ ಕಾಯ್ದೆ ಕುರಿತು ಅರಿವು ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸರ್ವರಿಗೂ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಮಕ್ಕಳನ್ನು ಶಾಲೆಗೆ ಕಳಿಸದೆ ದುಡಿಮೆಗೆ ಬಳಸಿಕೊಳ್ಳುತ್ತಿರುವುದು ಹಲವೆಡೆ ಕಂಡುಬಂದಿದೆ. ಬಾಲ ಕಾರ್ಮಿಕರನ್ನು ಗುರುತಿಸುವ ಸಲುವಾಗಿ ಇಲಾಖೆಯ ಮತ್ತು ವಿವಿಧ ಸಂಘ ಸಂಸ್ಥೆಗಳ ಸಂಯೋಗದೊಂದಿಗೆ ದಾಳಿ ನಡೆಸಿ ಬಾಲ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸುವ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ. ಜಿಲ್ಲೆಯನ್ನು ಬಾಲ ಕಾರ್ಮಿಕರ ಮುಕ್ತ ಜಿಲ್ಲೆ ಮಾಡಲು ಇಲಾಖೆಯೊಂದಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಬಚ್ಪನ್ ಬಚಾವೋ ಆಂದೋಲನದ ಬಿನು ವರ್ಗೀಸ್ ಅವರು ಬಾಲಕಾರ್ಮಿಕರ ಕಾಯ್ದೆ ಹಾಗೂ ಬಾಲ್ಯ ವಿವಾಹದ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸದ ಮೂಲಕ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆಯ ನಿರೀಕ್ಷಕಿ ವಿಜಯಲಕ್ಷ್ಮಿ, ಶಾಂತ ಟ್ರಸ್ಟ್ ಸಂಸ್ಥೆಯ ನಾರಾಯಣಸ್ವಾಮಿ, ಮಕ್ಕಳ ರಕ್ಷಣಾ ಘಟಕದ ವಿಜಯ ಕುಮಾರ್, ಮಕ್ಕಳ ಸಹಾಯವಾಣಿ ಕೇಂದ್ರದ ರೋಜಾ, ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸಯೀದಾ ಇಷ್ರತ್ ಹಾಜರಿದ್ದರು.