Chikkatekahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಚಿಕ್ಕತೇಕಹಳ್ಳಿ ಗ್ರಾಮದಲ್ಲಿ ರೈತರ ನೀಲಗಿರಿ ತೋಪಿಗೆ ಭಾನುವಾರ ಆಕಸ್ಮಿಕ ಬೆಂಕಿ ತಗುಲಿದ್ದು, 6 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆದಿದ್ದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ನೀಲಗಿರಿ ಮರಗಳು ಸುಟ್ಟುಹೋದವು.
ಬೇಸಿಗೆ ಬಂದರೆ ಬೆಂಕಿ ಬೀಳುವುದು ಸಾಮಾನ್ಯ.ಬಿಸಿಲಿಗೆ ಒಣಗಿದ ಸುರುಗಿಗೆ ಬೆಂಕಿ ತಾಗಿದರೆ ಸಾಕು, ಬೆಂಕಿ ತನ್ನ ಕೆನ್ನಾಲಿಗೆ ತೆರೆದು ಎಲ್ಲವನ್ನೂ ಸುಟ್ಟು ಭಸ್ಮ ಮಾಡುತ್ತದೆ.
ಮಧ್ಯಾಹ್ನ 12ರ ಸುಮಾರಿಗೆ ನೀಲಗಿರಿ ತೋಪಿಗೆ ಬೆಂಕಿ ಬಿದ್ದಿದ್ದು, ಬೆಂಕಿ ತೀವ್ರತೆಗೆ ಗಗನದೆತ್ತರಕ್ಕೆ ಹೊಗೆ ಹರಡಿತ್ತು. ಇದನ್ನು ಕಂಡ ಅಕ್ಕಪಕ್ಕದ ಜಮೀನಿನ ರೈತರು ಹಾಗೂ ಗ್ರಾಮದ ಯುವಕರು ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಬಿಸಿಲು ಹೆಚ್ಚಿದ್ದರಿಂದ ಹಾಗೂ ತೋಪಿನಲ್ಲಿ ನೆಲದಲ್ಲಿ ಹರಡಿದ್ದ ಮರದ ಎಲೆಗಳಿಗೆ ಬೆಂಕಿ ಜ್ವಾಲೆ ಹರಡಿದ್ದರಿಂದ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. ನಗರದ ಅಗ್ನಿ ಶಾಮಕ ದಳಕ್ಕೆ ದೂರವಾಣಿ ಮೂಲಕ ವಿಷಯ ತಿಳಿಸಿದರು. ತಕ್ಷಣವೇ ಸ್ಥಳಕ್ಕೆ ಧಾವಿಸಿ 2 ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಅವರು ಕಡೆಗೂ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಟೊಮೇಟೋ ಬೆಳೆಗೂ ಬೆಂಕಿ : ರೈತ ಸೊಣ್ಣಪ್ಪರೆಡ್ಡಿ ಬೆಳೆದಿರುವ ಟೊಮೇಟೋ ಗಿಡಗಳಿಗೆ ಬೆಂಕಿ ತಗುಲಿ, ಸುಡುತ್ತಿದ್ದನ್ನು ರೈತರು ಕಂಡು ಬೆಂಕಿಯನ್ನು ನೀರಿನಿಂದ ನಂದಿಸಿದರು. ಆದರೂ ಟೊಮೇಟೋ ಬೆಳೆಗಾಗಿ ಶೇಖರಿಸಿದ್ದ ಕಡ್ಡಿಗಳಿಗೂ ಬೆಂಕಿ ತಗುಲಿದ್ದರಿಂದ ಅವುಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಈ ಸಂದರ್ಭದಲ್ಲಿ ಅಗ್ನಿಶಾಮಕ ಸಿಬ್ಬಂದಿ ಪಿ.ಆರ್.ಶ್ರೀನಿವಾಸ್, ಸಂತೋಷ್,ಕೆ.ಶ್ರೀನಿವಾಸ್, ಸುರೇಶ್,ಗ್ರಾಮಸ್ಥರಾದ ಡಿ.ನಾಗೇಶ್, ಎನ್.ವೆಂಕಟರೆಡ್ಡಿ, ಮಂಜುನಾಥ್, ಗಜೇಂದ್ರ, ದೇವರಾಜ್,ಶ್ರೀರಾಮ್,ವೆಂಕಟರೆಡ್ಡಿ,ಸಂತೋಷ್,ಕಾಂತಮ್ಮ ಇದ್ದರು.