Home News ಪ್ರೌಢಶಾಲಾ ಮುಖ್ಯಶಿಕ್ಷಕರ ಸಮಾಲೋಚನಾ ಸಭೆ

ಪ್ರೌಢಶಾಲಾ ಮುಖ್ಯಶಿಕ್ಷಕರ ಸಮಾಲೋಚನಾ ಸಭೆ

0
Education Sidlaghatta HeadMasters Conclave

ತಾಲ್ಲೂಕಿನ ಚೀಮಂಗಲ ಸರ್ಕಾರಿ ಪ್ರೌಢಶಾಲೆಯ ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಪ್ರೌಢಶಾಲಾ ಮುಖ್ಯಶಿಕ್ಷಕರ ಸಮಾಲೋಚನಾ ಸಭೆಯಲ್ಲಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಎಂ.ಜಯರಾಂರೆಡ್ಡಿ ಮಾತನಾಡಿದರು.

ಕೋವಿಡ್ ನಡುವೆಯೂ ಶೈಕ್ಷಣಿಕ ಚಟುವಟಿಕೆಗಳು ಯಶಸ್ವಿಯಾಗಿ ನಡೆಯುತ್ತಿದ್ದು ಮಕ್ಕಳಲ್ಲಿ ಕಲಿಕಾ ಕಂದರ ಸೃಷ್ಟಿಯಾಗದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಮಕ್ಕಳ ಕಲಿಕೆಯ ನಿರಂತರತೆಯನ್ನು ಕಾಯ್ದುಕೊಳ್ಳಲಾಗುತ್ತಿದೆ. ಮುಂಬರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಯಾವುದೇ ವಿದ್ಯಾರ್ಥಿ ಅನುತ್ತೀರ್ಣರಾಗದಂತೆ ಪ್ರತಿಶತ ನೂರರಷ್ಟು ಉತ್ತೀರ್ಣತೆಯ ಪ್ರಮಾಣವನ್ನು ಸಾಧಿಸುವ ಗುರಿಯನ್ನು ಹೊಂದಲಾಗಿದೆ ಎಂದು ಅವರು ತಿಳಿಸಿದರು.

ನಿಗದಿತ ವೇಳೆಯೊಳಗೆ ವಿಷಯವಾರು ಶಿಕ್ಷಕರು ತಮ್ಮ ಚಟುವಟಿಕೆಯುತವಾದ ಬೋದನೆ ಮೂಲಕ ಪಠ್ಯವನ್ನು ಪೂರ್ಣಗೊಳಿಸಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು. ಮುಖ್ಯಶಿಕ್ಷಕರು ಆಗಿಂದಾಗ್ಗೆ ಶಿಕ್ಷಕರ ಸಭೆ ಕರೆದು ವಿಷಯವಾರು ಪೂರ್ಣಗೊಂಡಿರುವ ಪಠ್ಯ, ಉಳಿಕೆಯಾಗಿರುವ ಪಠ್ಯವನ್ನು ಪೂರ್ಣಗೊಳಿಸಬೇಕಾದ ಬಗ್ಗೆ ಸಮಾಲೋಚಿಸಬೇಕು. ಮುಂಬರುವ ಏಪ್ರಿಲ್ ಮೊದಲ ವಾರದೊಳಗೆ ವಿಷಯವಾರು ಪಠ್ಯ ಪಾಠಬೋಧನೆಯನ್ನು ಮುಗಿಸಿ ಪುನರಾವರ್ತನೆ ಕೈಗೊಳ್ಳಬೇಕು ಎಂದರು.

ನೊಂದಣಿ ಕಡ್ಡಾಯ: ಎಸ್ಸೆಸ್ಸೆಲ್ಸಿಯಲ್ಲಿ ಕಲಿಯುತ್ತಿರುವ ಎಲ್ಲಾ ಮಕ್ಕಳನ್ನೂ ಕಡ್ಡಾಯವಾಗಿ ಮುಖ್ಯಪರೀಕ್ಷೆಗೆ ನೊಂದಣಿ ಮಾಡಿಸಬೇಕು. ಶಿಕ್ಷಕರ ಕೊರತೆಯಿದ್ದು ಅಗತ್ಯವಿರುವ ಶಾಲೆಗಳಿಗೆ ಈಗಾಗಲೇ ಅತಿಥಿಶಿಕ್ಷಕರ ನೇಮಕ ಮಾಡಿಕೊಳ್ಳಲು ತಿಳಿಸಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಸೂಕ್ತ ಕ್ರಮಕೈಗೊಳ್ಳಲಾಗಿದೆ. ಅನಿವಾರ್ಯ ಕಾರಣಗಳಿಂದಾಗಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದುರಾಗಿದ್ದರೆ ನಿಯೋಜನೆ, ಮತ್ತಿತರ ಪರ್ಯಾಯ ಕ್ರಮಗಳ ಮೂಲಕ ಅನುಕೂಲ ಕಲ್ಪಿಸಲಾಗಿದೆ ಎಂದರು.

ಮುಖ್ಯಶಿಕ್ಷಕರು ಕಡ್ಡಾಯವಾಗಿ ವಾರದಲ್ಲಿ ಕನಿಷ್ಟ 12 ಅವಧಿಗಳ ಬೋಧನೆ ಮಾಡುವುದು. ಹಾಜರಾತಿಯನ್ನು ಪ್ರತಿದಿನವೂ ಎಸ್‌ಎಟಿಎಸ್‌ ತಂತ್ರಾಂಶದ ಮೂಲಕ ಶಾಲಾಲಾಗಿನ್‌ನಲ್ಲಿ ದಾಖಲಿಸಬೇಕು. ಪ್ರಸಕ್ತ ಸಾಲಿಗೆ ಅಳವಡಿಸಿಕೊಳ್ಳಬಹುದಾದ ಮೌಲ್ಯಮಾಪನ, ಪರೀಕ್ಷೆಗಳು, ಪಠ್ಯವಸ್ತು, ಶಾಲೆಬಿಟ್ಟ ಮಕ್ಕಳ ಮಾಹಿತಿ, ಸ್ಟೂಡೆಂಟ್ ಪ್ರೊಫೈಲ್ ನಿರ್ವಹಣೆ ಮತ್ತಿತರ ಇಲಾಖಾದೇಶಗಳನ್ವಯ ಕ್ರಮಕೈಗೊಳ್ಳಬೇಕು ಎಂದರು.

ಕ್ಷೇತ್ರಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ಮಾತನಾಡಿ, ಕೋವಿಡ್ ಹಿನ್ನೆಲೆಯಲ್ಲಿ ಔಪಚಾರಿಕ ತರಗತಿಗಳು ತಡವಾಗಿ ಆರಂಭವಾಗಿದ್ದರೂ ಈಗಾಗಲೇ ವಿದ್ಯಾಗಮದಂತಹ ಕಾರ್ಯಕ್ರಮಗಳ ಮೂಲಕ ಮಕ್ಕಳ ಕಲಿಕೆಯನ್ನು ಪ್ರೋತ್ಸಾಹಿಸಲಾಗಿದೆ. ಜನವರಿಯಿಂದ ತರಗತಿಗಳು ಆರಂಭವಾಗಿದ್ದು ಮೇ ಮಾಹೆವರೆಗೆ ಕಾಲಾವಕಾಶವಿದೆ. ಎಸ್ಸೆಸ್ಸೆಲ್ಸಿ ಮಕ್ಕಳನ್ನು ಪರೀಕ್ಷೆಗೆ ತಯಾರಿಮಾಡಬೇಕಾದ ಜವಾಬ್ದಾರಿ ಶಿಕ್ಷಕರ ಮೇಲಿದೆ. ಅಂತೆಯೇ 8 ಮತ್ತು 9 ನೇ ತರಗತಿಯ ವಿದ್ಯಾರ್ಥಿಗಳೂ ಕಲಿಕೆಯ ನಿರಂತರತೆಯನ್ನು ಕಾಯ್ದುಕೊಳ್ಳಲು ಶಿಕ್ಷಕರು ಶ್ರಮಿಸಬೇಕು ಎಂದರು.

 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಪಾಸಿಂಗ್ ಪ್ಯಾಕೇಜ್ ಕಿರು ಹೊತ್ತಿಗೆಗಳನ್ನು ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ವತಿಯಿಂದ ಬಿಡುಗಡೆಮಾಡಲಾಯಿತು. ಉಪನಿರ್ದೇಶಕರಾದ ಕೆ.ಎಂ.ಜಯರಾಮರೆಡ್ಡಿ ಅವರನ್ನು ಸನ್ಮಾನಿಸಲಾಯಿತು. ಶಾಲಾವಾರು ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾಫಲಿತಾಂಶ, ವಿದ್ಯಾರ್ಥಿಗಳ ಹಾಜರಾತಿ, ಮತ್ತಿತರ ವಿಷಯಗಳ ಕುರಿತು ಚರ್ಚಿಸಲಾಯಿತು.

 ತಾಲ್ಲೂಕು ಅಕ್ಷರದಾಸೋಹ ಸಹಾಯಕ ನಿರ್ದೇಶಕ ಆಂಜನೇಯ, ಉಪನಿರ್ದೇಶಕರ ಕಚೇರಿಯ ವಿಷಯ ಪರಿವೀಕ್ಷಕಿ ಕೃಷ್ಣಕುಮಾರಿ, ಶಿಕ್ಷಣ ಸಂಯೋಜಕ ಇ.ಭಾಸ್ಕರಗೌಡ, ಖಾಸಗಿ ಶಾಲಾ ಶಿಕ್ಷಕರ ಒಕ್ಕೂಟದ ಅಧ್ಯಕ್ಷ ಗೋಪಿನಾಥ್, ತಾಲ್ಲೂಕು ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಗೋಪಿನಾಥ್, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಬೈರಾರೆಡ್ಡಿ, ಕಾರ್ಯದರ್ಶಿ ಎಲ್.ವೆಂಕಟರೆಡ್ಡಿ, ಸಹಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ, ಎಂ.ಶಿವಕುಮಾರ್, ಮುಖ್ಯಶಿಕ್ಷಕ ಶಿವಶಂಕರ್, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ರಂಗನಾಥ್, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಂ,ಮುನಿರಾಜು, ತಾಲ್ಲೂಕಿನ ವಿವಿಧ ಪ್ರೌಢಶಾಲೆಗಳ ಮುಖ್ಯಶಿಕ್ಷಕರು ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version